ಪೋಷಕರೊಂದಿಗೆ ಪ್ರವಾಸಕ್ಕೆ ಹೋಗಲು ಆಫೀಸ್‌ನಿಂದಲೇ ಸಿಗಲಿದೆ 10 ಸಾವಿರದ ಜೊತೆಗೆ 3 ದಿನಗಳ ಪೇಯ್ಡ್ ಲೀವ್
ನಾವು ನಮ್ಮ ಪೋಷಕರಿಗೆ ನೀಡಬಹುದಾದ ಅತ್ಯಮೂಲ್ಯ ಉಡುಗೊರೆ ಎಂದರೆ ಅದು 'ಸಮಯ'. ಆದರೆ, ಇಂದಿನ ವೇಗದ ಬದುಕಿನಲ್ಲಿ ನಮಗೆ ಈ ಸತ್ಯ ಅರಿವಾಗುವುದೇ ತಡವಾಗಿ. ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಂದ ದುಬಾರಿ ಉಡುಗೊರೆಗಳನ್ನಾಗಲೀ ಅಥವಾ ಐಷಾರಾಮಿ ಜೀವನವನ್ನಾಗಲೀ ಎಂದಿಗೂ ಬಯಸುವುದಿಲ್ಲ. ಅವರು ಕೇಳುವುದು ಸ್ವಲ್ಪ ಸಮಯ, ಒಟ್ಟಿಗೆ ಕುಳಿತು ಊಟ ಮಾಡುವುದು, ಒಂದು ಸಣ್ಣ ಪ್ರವಾಸ ಹಾಗೂ ಮನಬಿಚ್ಚಿ ಮಾತನಾಡುವ ಕೆಲವು ನಿಮಿಷಗಳನ್ನು ಮಾತ್ರ.
ದುರಂತವೆಂದರೆ, ಈ ಕ್ಷಣಗಳ ಬೆಲೆ ನಮಗೆ ಅರ್ಥವಾಗುವುದು ಅವು ನಮ್ಮ ಕೈತಪ್ಪಿ ಹೋದ ಮೇಲೆ. ಉದಾಹರಣೆಗೆ, ನಿಮ್ಮ ಪೋಷಕರೊಂದಿಗೆ ಪ್ರವಾಸ ಹೋಗುವ ಯೋಜನೆಯನ್ನು ನೀವು ಎಷ್ಟು ಬಾರಿ ಮುಂದೂಡಿದ್ದೀರಿ? "ಮುಂದಿನ ತಿಂಗಳು ಹೋಗೋಣ," "ಈ ಪ್ರಾಜೆಕ್ಟ್ ಮುಗಿದ ನಂತರ ಹೋಗೋಣ," ಅಥವಾ "ಕೆಲಸದ ಒತ್ತಡ ಕಡಿಮೆಯಾದಾಗ ನೋಡೋಣ" ಎಂದು ಹೇಳುತ್ತಾ ಆ ಪ್ರವಾಸ ಎಂದಿಗೂ ಸಾಕಾರಗೊಳ್ಳುವುದೇ ಇಲ್ಲ. ಇದೇ ಕಾರಣಕ್ಕೆ ದೆಹಲಿ ಮೂಲದ 'ಎಲೈಟ್ ಮಾರ್ಕ್' ಪಿಆರ್ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ರಜತ್ ಗ್ರೋವರ್ ಅವರ ನಿರ್ಧಾರ ಎಲ್ಲರ ಗಮನ ಸೆಳೆದಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ರಜತ್ ಗ್ರೋವರ್ ತಮ್ಮ ಉದ್ಯೋಗಿಗಳಿಗೆ ವಿಶಿಷ್ಟವಾದ ಆಫರ್ ಒಂದನ್ನು ಘೋಷಿಸಿದ್ದಾರೆ. ಅದೇನೆಂದರೆ, ಉದ್ಯೋಗಿಗಳು ತಮ್ಮ ಪೋಷಕರೊಂದಿಗೆ ಪ್ರವಾಸ ಕೈಗೊಳ್ಳಲು ಕಂಪನಿಯಿಂದ 10,000 ರೂಪಾಯಿಗಳ ಭತ್ಯೆ ಹಾಗೂ 3 ದಿನಗಳ ವೇತನ ಸಹಿತ ರಜೆ ನೀಡಲಾಗುತ್ತಿದೆ. ಇದು ಕೇವಲ ಒಂದು ಆಫರ್ ಮಾತ್ರವಲ್ಲ, ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಪೋಷಕರಿಗೆ ನಾವು ನೀಡುವ ಸಣ್ಣ ಕೃತಜ್ಞತೆಯಾಗಿದೆ.
ಈ ಉಪಕ್ರಮದ ಬಗ್ಗೆ ಮಾತನಾಡುವಾಗ ಗಮನಿಸಬೇಕಾದ ಒಂದು ಮುಖ್ಯ ವಿಚಾರವೆಂದರೆ, ಈ ಮೂರು ದಿನಗಳ ರಜೆಯನ್ನು ಉದ್ಯೋಗಿಗಳ ವಾರ್ಷಿಕ ರಜೆಗಳ ಪಟ್ಟಿಯಿಂದ ಕಡಿತಗೊಳಿಸಲಾಗುವುದಿಲ್ಲ. ಇದು ಸಂಪೂರ್ಣವಾಗಿ ಹೆಚ್ಚುವರಿ ರಜೆಯಾಗಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ಕಂಪನಿಗಳು ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ಮಾತನಾಡುತ್ತವೆ. ಕೆಲವು ಕಂಪನಿಗಳು ಜಿಮ್ ಸದಸ್ಯತ್ವ ನೀಡಿದರೆ, ಇನ್ನು ಕೆಲವು ಆ್ಯಪ್‌ಗಳ ಸಬ್‌ಸ್ಕ್ರಿಪ್ಶನ್ ನೀಡುತ್ತವೆ. ಆದರೆ, ರಜತ್ ಗ್ರೋವರ್ ಅವರ ಈ ಹೆಜ್ಜೆ ನಿಜಕ್ಕೂ ಅತ್ಯಂತ ಮಾನವೀಯತೆಯಿಂದ ಕೂಡಿದೆ.
ಕೆಲಸ, ಟಾರ್ಗೆಟ್, ಮೀಟಿಂಗ್‌ಗಳು ಯಾವತ್ತಿಗೂ ಇರುತ್ತವೆ, ಆದರೆ ನಮ್ಮ ಪೋಷಕರು ನಮ್ಮೊಂದಿಗೆ ಶಾಶ್ವತವಾಗಿ ಇರುವುದಿಲ್ಲ ಎಂಬ ಕಟು ಸತ್ಯವನ್ನು ಈ ಉಪಕ್ರಮ ನೆನಪಿಸುತ್ತದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಲಿಂಕ್ಡ್‌ಇನ್ ಖಾತೆಗಳಲ್ಲಿ ಬರೆದುಕೊಂಡಿರುವ ಗ್ರೋವರ್, "ನಮ್ಮ ಪೋಷಕರು ನಮಗಾಗಿ ತಮ್ಮ ಸಮಯ, ಕನಸು, ಶಕ್ತಿ ಎಲ್ಲವನ್ನೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತ್ಯಾಗ ಮಾಡಿದ್ದಾರೆ. ಈಗ ನಾವು ಅವರಿಗೆ, ನೀವು ಯಾವಾಗಲೂ ಎಲ್ಲಿಗೆ ಹೋಗಬೇಕೆಂದುಕೊಂಡಿದ್ದೀರಿ? ಎಂದು ಕೇಳಿ ಅದನ್ನು ನನಸು ಮಾಡುವ ಸಮಯ ಬಂದಿದೆ" ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ರಜತ್ ಗ್ರೋವರ್ ಅವರನ್ನು "ಬಾಸ್ ಆಫ್ ದಿ ಇಯರ್" ಎಂದು ಕೊಂಡಾಡುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ಹಾಗೂ ಅವರ ಕೌಟುಂಬಿಕ ಸಂಬಂಧಗಳಿಗೆ ಬೆಲೆ ಕೊಡುವ ಇಂತಹ ನಾಯಕರು ಅಪರೂಪ. ಇತರ ದೊಡ್ಡ ದೊಡ್ಡ ಕಂಪನಿಗಳು ಸಹ ಎಲೈಟ್ ಮಾರ್ಕ್‌ನಿಂದ ಸ್ಫೂರ್ತಿ ಪಡೆಯಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಉದ್ಯೋಗಿಗಳಿಗೆ ಕೇವಲ ಬೋನಸ್ ಅಥವಾ ಸಾಮಾನ್ಯ ಭತ್ಯೆ ನೀಡುವುದಕ್ಕಿಂತ, ಅವರ ಜೀವನದ ಅತ್ಯಮೂಲ್ಯ ಸಂಬಂಧಗಳಿಗೆ ಸಮಯ ಮೀಸಲಿಡಲು ಪ್ರೋತ್ಸಾಹಿಸುವ ಎಲೈಟ್ ಮಾರ್ಕ್ ತಂಡದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸುದ್ದಿ ಓದಿದ ಮೇಲಾದರೂ ನೀವು ನಿಮ್ಮ ಪೋಷಕರೊಂದಿಗೆ ಬಾಕಿ ಉಳಿದಿರುವ ಆ ಪ್ರವಾಸವನ್ನು ಕೂಡಲೇ ಪ್ಲಾನ್ ಮಾಡಿ, ಏಕೆಂದರೆ ಭವಿಷ್ಯವು ಯಾರಿಗೂ ಖಚಿತವಿಲ್ಲ.












Click it and Unblock the Notifications