ಕರ್ನಾಟಕ ಬಜೆಟ್ ಸಭೆಯಲ್ಲಿ ಭಾಗವಹಿಸದ ಡಿಸಿಎಂ ಡಿ.ಕೆ ಶಿವಕುಮಾರ್ ?
ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಭಾನುವಾರವಷ್ಟೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ನಗರ ಸಂಚಾರ ಮಾಡಿದ್ದರು. ವೈಟ್‌ಟಾಪಿಂಗ್ ಕಾಮಗಾರಿಗಳನ್ನು ಪರಿಶೀಲನೆ ಮಾಡಿ, ಬೆಂಗಳೂರಿಗೆ ಇಂಟರ್ ನ್ಯಾಷನಲ್ ಲೆವೆಲ್ ರೋಡ್ಸ್ ಮಾಡುವುದಾಗಿ ಹೇಳಿದ್ದರು. ಬೆಂಗಳೂರಿನಲ್ಲಿ ಇನ್ನೂ ಹೊಸದಾಗಿ 450 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್‌ಟಾಪಿಂಗ್ ಮಾಡುವುದಾಗಿ ಹೇಳಿದ್ದರು.ಆದರೆ, ಇದೀಗ ಅವರು ಬೆಂಗಳೂರು ಅಭಿವೃದ್ಧಿ ಹಾಗೂ ಬೆಂಗಳೂರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಜೆಟ್ ಅಧಿವೇಶನದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರು ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ವೈಟ್ ಟಾಪಿಂಗ್ ಕಾಮಗಾರಿ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರ ಆಗುತ್ತಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನಿಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನೀವು ಮಾಡಬೇಕಾದ ಕೆಲಸ ಬೇಕಾದಷ್ಟಿದೆ. 660 ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರು ನಗರದಾದ್ಯಂತ ಇನ್ನೂ ಸಾವಿರಾರು ರಸ್ತೆಗುಂಡಿಗಳು ಬಾಯ್ತೆರೆದುಕೊಂಡೇ ಇವೆ. ಮಾರ್ಚ್ ತಿಂಗಳಿನಿಂದ ಏಪ್ರಿಲ್ ವರೆಗೂ ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚೋಕೆ, ರಸ್ತೆ ರಿಪೇರಿ ಮಾಡೋಕೆ ಒಳ್ಳೆ ಸಮಯ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಮಳೆಗಾಲದಲ್ಲಿ ರಸ್ತೆಗುಂಡಿಗಳು ಮತ್ತೊಮ್ಮೆ ಸಾರ್ವಜನಿಕರಿಗೆ ಮೃತ್ಯು ಕೂಪಗಳಾಗುವುದು ಗ್ಯಾರಂಟಿ ಎಂದು ಎಚ್ಚರಿಸಿದ್ದಾರೆ.
ಕಳೆದ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾ ಜೊತೆ ಶಾಮೀಲಾಗಿ ಜನರನ್ನು ಸುಲಿಗೆ ಮಾಡಿದಿರಿ. ಈ ವರ್ಷವಾದರೂ ಬೇಸಿಗೆ ಕಾಲದಲ್ಲಿ ಬೆಂಗಳೂರಿನ ಜನತೆ ನೀರಿಗಾಗಿ ಬವಣೆ ಪಡದಂತೆ ಏನಾದರೂ ಕ್ರಮ ಕೈಗೊಳ್ಳುತ್ತೀರೋ ಅಥವಾ ಜನರನ್ನು ಟ್ಯಾಂಕರ್ ಮಾಫಿಯಾ ಮರ್ಜಿಗೆ ಬಿಟ್ಟುಬಿಡುತ್ತೀರೋ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಆರ್‌ಎಸ್ ಜಾಲಯದಿಂದ ತಮಿಳುನಾಡಿಗೆ ನೀರು ಹರಿಯದಂತೆ ಈ ವರ್ಷವಾದರೂ ಮುನ್ನೆಚ್ಚರಿಕೆ ವಹಿಸಿ. ಎಷ್ಟು ನೀರು ಬಿಟ್ಟರೂ ತಮಿಳುನಾಡಿನವರು ಕ್ಯಾತೆ ತೆಗೆಯುವುದಂತೂ ಗ್ಯಾರೆಂಟಿ. ಅದಕ್ಕಾಗಿ ಈಗಲೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಿ. ಕರ್ನಾಟಕದ ಪರವಾಗಿ ಗಟ್ಟಿಯಾದ ವಾದ ಮಂಡಿಸಲು ತಯಾರಾಗಿ ಎಂದೂ ಸಲಹೆ ನೀಡಿದ್ದಾರೆ.
ಅಂದಹಾಗೆ ಸಿಎಂ ಸಿದ್ದರಾಮಯ್ಯನವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಉಪಮುಖ್ಯಮಂತ್ರಿಗಳಾಗಿ ತಾವು ಎಲ್ಲಿಯೂ ಕಾಣಲೇ ಇಲ್ಲವಲ್ಲ. ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಯಾವ ಯೋಜನೆಗಳು ಬೇಕು. ಅದಕ್ಕೆಷ್ಟು ಅನುದಾನ ಬೇಕಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾದರೂ ಮಾಡಿದ್ದೀರಾ ಅಥವಾ ಕುರ್ಚಿ ಕಿತ್ತಾಟದಲ್ಲಿ ತಮ್ಮ ಕರ್ತವ್ಯವನ್ನೇ ಮರೆತಿದ್ದೀರಾ ಎಂದು ಡಿ.ಕೆ ಶಿವಕುಮಾರ್ ಅವರನ್ನು ಆರ್. ಅಶೋಕ್ ಕೇಳಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗಳಿಗೆ ಡಿಸಿಎಂ ಸಾಹೇಬರ ಅನುಪಸ್ಥಿತಿ ನೋಡಿದರೆ ಬಹುಶಃ ಅವರಿಗೆ ಆಹ್ವಾನವೇ ಇಲ್ಲ ಅನ್ನಿಸುತ್ತೆ. ಇಲ್ಲವೇ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ನಾಮಕಾವಸ್ತೆ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications