ಬೆಂಗಳೂರಿನ ಜನರಿಗೆ ಮುಂದಿನ 10 ವರ್ಷ ಈ ಸಮಸ್ಯೆ ಇರೋದಿಲ್ಲ: ಡಿಕೆಶಿ ಹೇಳಿದ್ದೇನು?
ಸಿಲಿಕಾನ್ ಸಿಟಿ ಬೆಂಗಳೂರಿನ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಇಂದು ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಇದಕ್ಕೂ ಮುನ್ನ ಮಾತನಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಂದಿನ 10 ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಬೆಂಗಳೂರಿಗೆ ಮುಂದಿನ 10 ವರ್ಷಗಳವರೆಗೆ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ. ಈ ಯೋಜನೆಯಿಂದ ಬರೋಬ್ಬರಿ 50 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಇದಕ್ಕಾಗಿ ಸುಮಾರು 5000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ನಾನು ಏನು ಭರವಸೆ ನೀಡಿದ್ದೇನೋ ಅದನ್ನು ಬೆಂಗಳೂರಿನ ಜನತೆಗೆ ತಲುಪಿಸಿದ್ದೇನೆ. ನಾನು ಬೆಂಗಳೂರಿನ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ಇಂದು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ರಾಜ್ಯ ಸರ್ಕಾರ ಲೋಕಾರ್ಪಣೆ ಮಾಡಲಿದೆ. ಕಾವೇರಿ 6ನೇ ಹಂತದ ಯೋಜನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಕೂಡಾ ಸಿದ್ಧವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರನ್ನು ಪೂರೈಸುವ ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾದ ಕಾವೇರಿ 5ನೇ ಹಂತದ ಯೋಜನೆಯ ಉದ್ಘಾಟನೆಗೂ ಮುನ್ನ ಶುಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿಸಿ, ಗಂಗಾ ಪೂಜೆ ಸಲ್ಲಿಸಿದ್ದಾರೆ. ಸಪ್ತ ನದಿಗಳ ನೀರನ್ನು ತಂದು ವಿಶೇಷ ಪೂಜೆ ಕೂಡ ನೆರವೇರಿಸಿದ್ದಾರೆ.

ಹಲವಾರು ವಿಶೇಷತೆಗಳನ್ನು ಹೊಂದಿರುವ, ಸುಧಾರಿತ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ನಿರ್ಮಿಸಲಾಗಿರುವ ಈ ಯೋಜನೆಯು ಜಲಸುರಕ್ಷತೆಯ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿದೆ. ಮನೆಮನೆಗೂ ಕಾವೇರಿ ನೀರನ್ನು ಒದಗಿಸುವ ಯೋಜನೆಯು ಸಾಕಾರಗೊಳ್ಳಲು ಅಹರ್ನಿಶಿಯಾಗಿ ದುಡಿದ ಬೆಂಗಳೂರು ಜಲಮಂಡಳಿಯ ಎಲ್ಲಾ ಅಧಿಕಾರಿಗಳಿಗೂ ಹಾಗೂ ಕಾರ್ಮಿಕ ವರ್ಗಕ್ಕೂ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಈ ಯೋಜನೆಯು ಕುಡಿಯುವ ನೀರನ್ನು ಪೂರೈಸಲಿದೆ. ಕಳೆದ ಬೇಸಿಗೆಯಲ್ಲಿ ಬೆಂಗಳೂರು ಭೀಕರ ಜಲಕ್ಷಾಮಕ್ಕೆ ತುತ್ತಾಗಿತ್ತು. ಇನ್ನು ಮುಂದಿನ ದಿನಗಳಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಬೆಂಗಳೂರನ್ನು ಕಾಡಬಾರದು ಎಂಬ ನಿಟ್ಟಿನಲ್ಲಿ ʻಮನೆಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರುʼ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದರಿಂದ ದಶಕಗಳಿಂದ ಜನರು ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ. ʻಮನೆಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರುʼ ಎಂಬ ಧ್ಯೇಯದೊಂದಿಗೆ, ಈ ಯೋಜನೆಗೆ ತೊರೆಕಾಡನಹಳ್ಳಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ನಾನು ಜೊತೆಯಾಗಿ ಚಾಲನೆ ನೀಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜಲಸಮೃದ್ಧ ಬೆಂಗಳೂರಿಗಾಗಿ ಮನೆಮನೆಗೂ ಕಾವೇರಿ ನೀರು ಪೂರೈಸುವ ಮಹತ್ವದ ಗುರಿಯೊಂದಿಗೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಈ ಯೋಜನೆ ಲೋಕಾರ್ಪಣೆಗೊಳ್ಳುತ್ತಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಈ ಯೋಜನೆಯು ಕುಡಿಯುವ ನೀರನ್ನು ಪೂರೈಸಲಿದೆ.












Click it and Unblock the Notifications