ಕೋವಿಡ್; ಬೆಂಗಳೂರಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಕುಸಿತ
ಬೆಂಗಳೂರು, ಫೆಬ್ರವರಿ 17; ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ 835 ಹೊಸ ಪ್ರಕರಣ ದಾಖಲಾಗಿದೆ, ಸಕ್ರಿಯ ಪ್ರಕರಣಗಳು 9955 ಆಗಿದೆ.
ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಹೆಚ್ಚು ಎಂದರೆ ಶೇ 15ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಈಗ ದಾಖಲಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಹೆಚ್ಚಿನ ಜನರು ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖಗೊಳ್ಳುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಇಳಿಮುಖವಾಗಿದೆ.

ಬಿಬಿಎಂಪಿ ವಾರ್ ರೂಂ ಅಂಕಿ ಸಂಖ್ಯೆಗಳ ಪ್ರಕಾರ ಕಳೆದ 15 ದಿನದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕುಸಿತವಾಗಿದೆ. ಫೆಬ್ರವರಿ 4ರಂದು ಆಸ್ಪತ್ರೆಗೆ ದಾಖಲಾದವರು 54 ಜನ. ಫೆಬ್ರವರಿ 8ರಂದು ಕೇವಲ 15 ಜನ. ಫೆಬ್ರವರಿ 13ರಂದು 5 ಜನ.
ಆದರೆ ಕಳೆದ 7 ದಿನಗಳಲ್ಲಿ ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇರೆ ವಲಯಗಳಿಗೆ ಹೋಲಿಕೆ ಮಾಡಿದರೆ ಪಶ್ಚಿಮ ವಲಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಅಧಿಕವಾಗಿದೆ.
ಕಳೆದ ಏಳು ದಿನಗಳಲ್ಲಿ ಪ್ರತಿ ದಿನ ಸರಾಸರಿ 8422 ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ 0.89 ಆಗಿದೆ. ಶೇ 84.94ರಷ್ಟು ಸೋಂಕಿತರು ಪಶ್ಚಿಮ ವಲಯದಲ್ಲಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಶೇ 15.06ರಷ್ಟು ಜನರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಸೇರಿದ್ದಾರೆ.
ಕಳೆದ 7 ದಿನಗಳಲ್ಲಿ ಮಹದೇವಪುರ ವಲಯದಲ್ಲಿ ಪಾಸಿಟಿವಿಟಿ ದರ ಶೇ 3.96ರಷ್ಟಿದೆ. ಆದರೆ ಆಸ್ಪತ್ರೆ ಸೇರುವವರ ಸಂಖ್ಯೆ ಶೇ 4.61 ಆಗಿದೆ. ಉಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.
ನಾವು ಪ್ರತಿದಿನ ಸುಮಾರು 7 ಸಾವಿರ ಮಾದರಿಗಳ ಪರೀಕ್ಷೆಗಳನ್ನು ಮಾಡುತ್ತಿದ್ದೆವು. 40 ರಿಂದ 50 ಪ್ರಕರಣ ಖಚಿತವಾಗುತ್ತಿತ್ತು. ಈಗ ಪರೀಕ್ಷೆಯ ಗುರಿಗಳನ್ನು ಪರಿಷ್ಕರಣೆ ಮಾಡಲಾಗಿದ್ದು, 4,500 ಮಾದರಿಗಳ ಪರೀಕ್ಷೆ ಮಾಡುತ್ತಿದ್ದೇವೆ ಎಂದು ಪಶ್ಚಿಮ ವಲಯದ ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಸೋಂಕು ಖಚಿತವಾದರೆ ಬಿಬಿಎಂಪಿ ವಲಯ ಕಚೇರಿಯಿಂದಲೇ ಸೋಂಕಿತನಿಗೆ ಕರೆ ಬರುತ್ತದೆ. ಸೋಂಕಿತರ ವಿವರಗಳನ್ನು ಪಡೆಯಲಾಗುತ್ತದೆ. ರೋಗಿಯ ವಯಸ್ಸು ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಕೆಲವು ಸೋಂಕಿತರು ರೋಗ ಲಕ್ಷಣಗಳು ಇದ್ದರೂ ಆಸ್ಪತ್ರೆಗೆ ದಾಖಲಾಗದೇ ಹೋಂ ಐಸೋಲೇಷನ್‌ನಲ್ಲಿ ಅದೇ ಚಿಕಿತ್ಸೆ ಮುಂದುವರೆಸುತ್ತಾರೆ. ಅಂತಹ ರೋಗಿಗಳು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಯಾವ ವಲಯ ಎಷ್ಟು?; ಬಿಬಿಎಂಪಿಯ ಯಲಹಂಕ ವಲಯ ಶೇ 9.27, ಬೊಮ್ಮನಹಳ್ಳಿ ಶೇ 6.54, ಪೂರ್ವ ವಲಯ ಶೇ 4.12, ಆರ್ ಆರ್ ನಗರ ಶೇ 4.74, ದಕ್ಷಿಣ ವಲಯ ಶೇ 4.92 ಆಸ್ಪತ್ರೆ ದಾಖಲಾಗುವ ಪ್ರಮಾಣವಿದೆ. ಕಂಟೈನ್ಮೆಂಟ್ ವಲಯಗಳು ಇಳಿಕೆಯಾಗಿದ್ದು ಸದ್ಯ ಸಕ್ರಿಯ ಕಂಟೈನ್ಮೆಂಟ್ ವಲಯಗಳು ಕೇವಲ 17 ಆಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ದಾಖಲಾದ ಹೊಸ ಪ್ರಕರಣಗಳು 1894 ಆಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳು 23,284. ಪಾಸಿಟಿವಿಟಿ ದರ ಶೇ 1.90 ಆಗಿದೆ.
ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದ ಬಳಿಕ ಕರ್ನಾಟಕ ಸರ್ಕಾರ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವಾರು ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದೆ. ಅಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಮೀಸಲಿಡುವ ಆದೇಶವನ್ನು ಸಹ ವಾಪಸ್ ಪಡೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಿದ್ದು, ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಗಳನ್ನು ಲಸಿಕೆ ನೀಡುವ ಅಭಿಯಾನಕ್ಕೆ ನೇಮಕ ಮಾಡಿದೆ.












Click it and Unblock the Notifications