2666 ಮಂದಿ ಜೊತೆಗೆ ಕೊರೊನಾ ಸೋಂಕಿತ ಬೆಂಗಳೂರು ಟೆಕ್ಕಿ ಸಂಪರ್ಕ!
ಬೆಂಗಳೂರು, ಮಾರ್ಚ್ 10: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಅಮೇರಿಕಾದಿಂದ ಬೆಂಗಳೂರಿಗೆ ಬಂದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಮಾರ್ಚ್ 1 ರಂದು ಬೆಳಗ್ಗೆ 8.30 ನಿಮಿಷಕ್ಕೆ ಬೆಂಗಳೂರಿಗೆ ಬಂದ ಟೆಕ್ಕಿಗೆ ಮಾರ್ಚ್ 2 ಮತ್ತು ಮಾರ್ಚ್ 3 ರಂದು ರೋಗದ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ.
ಮಾರ್ಚ್ 4 ರಂದು ಶೀತ, ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಬಳಿಕ ರಾಜೀವ್ ಗಾಂಧಿ ಆಸ್ಪತ್ರೆಗೆ ಟೆಕ್ಕಿ ದಾಖಲಾಗಿದ್ದಾರೆ. ಪರೀಕ್ಷೆಗೆ ಒಳಪಡಿಸಿದ ಮೇಲೆ ಟೆಕ್ಕಿಗೆ ಕೊರೊನಾ ವೈರಸ್ ಪಾಸಿಟೀವ್ ಇರುವುದು ಕಂಡು ಬಂದಿದೆ. ಅಮೇರಿಕಾ ಮತ್ತು ದುಬೈಗೆ ಹೋಗಿ ಬಂದಿದ್ದ ಟೆಕ್ಕಿಯಿಂದಾಗಿ ಬೆಂಗಳೂರಿನಲ್ಲಿದ್ದ ಪತ್ನಿ ಮತ್ತು ಮಗಳಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
ಇನ್ನೊಂದು ಆಘಾತಕಾರಿ ವಿಷಯ ಏನಂದ್ರೆ, ಆ ಟೆಕ್ಕಿ ಒಟ್ಟು 2666 ಮಂದಿಯ ಜೊತೆ ಸಂಪರ್ಕ ಮಾಡಿದ್ದಾರಂತೆ.!

ಆಘಾತಕಾರಿ ವಿಷಯ
ಅಮೇರಿಕಾದಿಂದ ಬೆಂಗಳೂರಿಗೆ ಬರುವವರೆಗೂ ಆ ಟೆಕ್ಕಿ ಒಟ್ಟು 2666 ಮಂದಿಯ ಜೊತೆ ಸಂಪರ್ಕ ಮಾಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಎಲ್ಲರಿಗೂ ವೈದ್ಯಕೀಯ ಪರೀಕ್ಷೆ
ಎಮಿರೇಟ್ಸ್ ವಿಮಾನದಲ್ಲಿ ಟೆಕ್ಕಿ ಜೊತೆಗೆ ಪ್ರಯಾಣ ಮಾಡಿದ್ದವರಿಂದ ಹಿಡಿದು, ಬೆಂಗಳೂರಿಗೆ ಬಂದ ಟೆಕ್ಕಿಯ ಜೊತೆ ಕೆಲಸ ಮಾಡಿದವರು ಮತ್ತು ಅಕ್ಕ-ಪಕ್ಕದ ಮನೆಯವರನ್ನೂ ಸಂಪರ್ಕಿಸಿ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಸುರಕ್ಷಾ ಕ್ರಮಗಳು
ಸದ್ಯಕ್ಕೆ ಟೆಕ್ಕಿ ಸೇರಿದಂತೆ ಕೊರೊನಾ ಸೋಂಕಿತ ನಾಲ್ವರನ್ನು ಪ್ರತ್ಯೇಕವಾಗಿ ಇರಿಸಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಂಪನಿಗೆ ವರ್ಕ್ ಫ್ರಮ್ ಹೋಮ್
ಅತ್ತ ಟೆಕ್ಕಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ದೊಮ್ಲೂರಿನಲ್ಲಿರುವ ಐಟಿ ಕಂಪನಿಯ ಎಲ್ಲಾ ನೌಕರರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿದೆ. ಮಾರ್ಚ್ 24 ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಎಲ್ಲಾ ನೌಕರರಿಗೆ ಕಂಪನಿ ಸೂಚಿಸಿದೆ. ಮನೆಯಿಂದ ಕೆಲಸ ಮಾಡಲು ಸಾಧ್ಯವಾಗದೆ ಇರುವವರು ಕಛೇರಿಯಲ್ಲಿ ಶುಚಿತ್ವ ಕಾಪಾಡಿಕೊಂಡು, ಜಾಗರೂಕರಾಗಿರಲು ಕಂಪನಿಯ ಅಧ್ಯಕ್ಷ ತಿಳಿಸಿದ್ದಾರೆ.












Click it and Unblock the Notifications