ಬೆಂಗಳೂರು: 2022ರೊಳಗೆ 75 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ
ಬೆಂಗಳೂರು,ಜನವರಿ 28: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 2022ರೊಳಗೆ 75ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯಪಾಲ ವಜುಭಾಯ್ ವಾಲಾ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಹಂತ-2 ಮತ್ತು ಹಂತ-2ಎ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2022ರ ವೇಳೆಗೆ 75 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಜನರಿಗೆ ಸುಗಮ ಆಡಳಿತ ನೀಡುವ ಅನುಕೂಲಕ್ಕಾಗಿ ಬಿಬಿಎಂಪಿ ಅಧಿನಿಯಮ ತಿದ್ದುಪಡಿ ಮಾಡಲಾಗಿದೆ. ಜನರ ಜೀವನ ಮಟ್ಟ ಸುಧಾರಿಸಲು ಬೆಂಗಳೂರು ಮಿಷನ್-2020ಯನ್ನು ಜಾರಿ ಮಾಡಲಾಗಿದೆ. ಇದಕ್ಕಾಗಿ ನಗರದಲ್ಲಿ 8015 ಕೋಟಿ ರೂ. ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಸ್ವಯಂ ಚಲಾತ ದರ ಸಂಗ್ರಹಣೆಗಾಗಿ ಒಂದು ದೇಶ ಒಂದು ಕಾರ್ಡ್‍ನ್ನು ಬೆಂಗಳೂರು ಮೆಟ್ರೋ ರೈಲು ಮತ್ತು ಬಿಎಂಟಿಸಿಯಲ್ಲಿ ಅನುಷ್ಠಾನ ಮಾಡಲು ಯೋಜಿಸಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ 15,767 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಒಳಚರಂಡಿ ಕಲ್ಪಿಸಲು 1000 ಕೋಟಿ, ನಗರೋತ್ಥಾನ ಮೂರನೇ ಹಂತದಲ್ಲಿ 1598 ಕಾಮಗಾರಿಗಳನ್ನು 263 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ನವನಗರೋತ್ಥಾನ ಕಾರ್ಯಕ್ರಮದಡಿ ರಾಜಕಾಲುವೆಗಳನ್ನು ದುರಸ್ತಿಗೊಳಿಸಲು 1060 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ.












Click it and Unblock the Notifications