ಕಾಂಗ್ರೆಸ್ ಶಾಸಕ ರಾಜು ಕಾಗೆ ಹಿರಿಯ ಪುತ್ರಿ ನಿಧನ
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ಭರಮಗೌಡ ಕಾಗೆ (37) ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದ ಹಿನ್ನೆಲೆ ಕೃತಿಕಾ ಅವರನ್ನು ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಶನಿವಾರ ನಿಧನರಾಗಿದ್ದಾರೆ. ಇವರಿಗೆ ಮೂರು ವರ್ಷದ ಪುತ್ರಿ ಕೂಡ ಇದ್ದಾರೆ.
ಸ್ವಗ್ರಾಮ ಉಗಾರದಲ್ಲಿ ಕೃತಿಕಾ ಕಾಗೆ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೃತಿಕಾ ಅವರು ಪತಿ ಡಾ.ಅನಿಲ ಪಾಟೀಲ್ ಹಾಗೂ ಮೂರು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರಿಗೆ ಕೆಲವು ತಿಂಗಳುಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆ ಇತ್ತು. ಇದಕ್ಕಾಗಿ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು.

ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಶಾಸಕ ರಾಜು ಕಾಗೆ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇವರಲ್ಲಿ ಕೃತಿಕಾ ಅವರೇ ಮೊದಲನೇ ಪುತ್ರಿ. ಶಾಸಕ ರಾಜು ಕಾಗೆ ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ.
ಕೃತಿಕಾ ಅವರ ನಿಧನಕ್ಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜು ಅಣ್ಣಾ ಕಾಗೆ ಅವರ ಹಿರಿಯ ಸುಪುತ್ರಿ ಶ್ರೀಮತಿ ಕೃತಿಕಾ ಅವರ ನಿಧನದ ಸುದ್ಧಿ ಮನಸ್ಸಿಗೆ ಅತೀವ ನೋವು ತಂದಿದೆ. ಈ ಸಂದರ್ಭದಲ್ಲಿ ಭಗವಂತ ಕೃತಿಕಾ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕಾಗೆ ಹಾಗೂ ಪಾಟೀಲ ಬಂಧುಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಂತ್ವನ ಹೇಳಿದ್ದಾರೆ.
ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರ ಹಿರಿಯ ಸುಪುತ್ರಿ ಕೃತಿಕಾ ಕಾಗೆ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರೂ ಕಂಬನಿ ಮಿಡಿದಿದ್ದಾರೆ.
ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆಯವರ ಹಿರಿಯ ಸುಪುತ್ರಿ ಶ್ರೀಮತಿ ಕೃತಿಕಾ ಅವರು ದೈವಾರಾದಿನರಾದರೆಂದು ತಿಳಿಸಲು ಅತೀವ ದುಃಖವಾಗುತ್ತದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಕೂಡ ಸಾಂತ್ವನ ಹೇಳಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪ್ರಮುಖ ರಾಜಕೀಯ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications