CJ Roy Suicide: ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ
Confident Group Chairman CJ Roy: ಬೆಂಗಳೂರು ನಗರದ ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ಗುರುವಾರ (ಜನವರಿ 30) ಆತಂಕಕಾರಿ ಘಟನೆ ಸಂಭವಿಸಿದೆ. ಖ್ಯಾತ ಉದ್ಯಮ ಸಮೂಹವಾದ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, ಇಂದು ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ಇಂದು (ಜನವರಿ 30) ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಬಳಿಕ ಪರಿಶೀಲನೆ ನಡೆಸುತ್ತಿದ್ದರು. ಇದೇ ರೀತಿಯ ಐಟಿ ಪರಿಶೀಲನೆಗಳು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಇದರ ಒತ್ತಡವು ಉದ್ಯಮಿಯ ಮೇಲೆ ಪರಿಣಾಮ ಬೀರಿರಬಹುದೆಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಉದ್ಯಮ ವಲಯದಲ್ಲಿ ಚರ್ಚೆ: ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಾಕೆ ಅವರು ಪ್ರಕರಣದ ಕುರಿತು ಆದಾಯ ತೆರಿಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾವಿನ ನಿಖರ ಕಾರಣ ಹಾಗೂ ಹಿನ್ನೆಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ನಗರದ ಉದ್ಯಮ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ತನಿಖೆಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.
ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್ ಟೌನ್ ಪ್ರದೇಶದಲ್ಲಿ ಇಂದು ಆತಂಕಕಾರಿ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಚೇರ್ಮನ್ ಸಿ.ಜೆ.ರಾಯ್ ಅವರು ತಮ್ಮ ಕಚೇರಿಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಮಧ್ಯಾಹ್ನ ವೇಳೆಗೆ ಕಚೇರಿಗೆ ಆಗಮಿಸಿದ್ದ ಸಿ.ಜೆ. ರಾಯ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಐಟಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದು, ಕೆಲವು ದಾಖಲೆಗಳನ್ನು ಹಸ್ತಾಂತರಿಸಿದ್ದರೆಂದು ತಿಳಿದುಬಂದಿದೆ. ಬಳಿಕ ಇನ್ನಷ್ಟು ದಾಖಲೆ ತರಲು ಕಚೇರಿಯ ಒಳಕೋಣೆಗೆ ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿರುವ ಶಂಕೆ ಇದೆ.
ಗುಂಡು ಹಾರಿಸಿಕೊಂಡ ಬಳಿಕ ತಕ್ಷಣವೇ ಅವರನ್ನು ಆನೇಕಲ್‌ನ ನಾರಾಯಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆ ಮಾಹಿತಿ ತಿಳಿದ ಕೂಡಲೇ ಅಶೋಕ್ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದುವರೆದ ಪರಿಶೀಲನೆ ಕಾರ್ಯ: ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರು ಪ್ರಕರಣದ ತನಿಖೆ ಕೈಗೊಂಡಿದ್ದು, ಬಳಸಲಾಗಿದೆ ಎನ್ನಲಾದ ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಯಾವುದೇ ಡೆತ್ ನೋಟ್, ಮೊಬೈಲ್ ಸಂದೇಶಗಳು ಅಥವಾ ಇತರ ಸುಳಿವುಗಳಿಗಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ.
ಸಿಜೆ ರಾಯ್ ಯಾವ ರಾಜ್ಯದವರು?: ಮೂಲತಃ ಕೇರಳದವರಾಗಿರುವ ಸಿ.ಜೆ. ರಾಯ್ ಅವರು 1997ರಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಜೀವನ ಆರಂಭಿಸಿದ್ದರು. ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳಸಿದರು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿದ ಅವರು, ಬಳಿಕ ಭಾರೀ ಪ್ರಮಾಣದಲ್ಲಿ ವ್ಯವಹಾರ ವಿಸ್ತರಿಸಿದ್ದರು ಎಂದು ಹೇಳಲಾಗುತ್ತಿದೆ.
ಇನ್ನೂ ಇಂದು ನಡೆದ ಘಟನೆ ನಂತರ ಆದಾಯ ತೆರಿಗೆ ಅಧಿಕಾರಿಗಳು ಕಚೇರಿಯಿಂದ ವಾಪಸ್ ತೆರಳಿದ್ದಾರೆ. ಸಿ.ಜೆ.ರಾಯ್ ಅವರ ಸಾವಿನ ನಿಖರ ಕಾರಣ ಹಾಗೂ ಹಿನ್ನೆಲೆ ಕುರಿತು ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.












Click it and Unblock the Notifications