ಸಹಿ ಹಾಕುವುದನ್ನೆ ಮರೆತರು ರಾಮಲಿಂಗಾ ರೆಡ್ಡಿ, ರದ್ದಾಗುತ್ತಾ ನಾಮಪತ್ರ?
ಬೆಂಗಳೂರು, ಏಪ್ರಿಲ್ 28: ಬಿಟಿಎಂ ಲೇಔಟ್ ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಿಂತಿರುವ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ರಾಮಲಿಂಗಾ ರೆಡ್ಡಿ ಅವರು ತಮ್ಮ ನಾಮಪತ್ರವನ್ನು ನಿಯಮಬದ್ಧವಾಗಿ ಸಲ್ಲಿಸಿಲ್ಲ ಅವರು ನಾಮಪತ್ರದಲ್ಲಿ ಸಹಿ ಮಾಡಿಲ್ಲ ಆದರೂ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ ಮತ್ತು ಊರ್ಜಿತಗೊಳಿಸಿದ್ದಾರೆ. ಕೂಡಲೇ ಅವರ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಕನ್ನಡ ಹೋರಾಟಗಾರ ಸಂಘದ ನಾಗೇಶ್ ಎಂಬುವರು ದೂರು ನೀಡಿದ್ದಾರೆ.

ಬಿಟಿಎಂ ಬಡಾವಣೆಯಿಂದ ಚುನಾವಣೆಗೆ ಸ್ಪರ್ಧಿಸಿರುವ ರಾಮಲಿಂಗಾರೆಡ್ಡಿ ಅವರು 25 ಪುಟಗಳ ಅಫಿಡೆವಿಟ್, ನಾಮಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ಎಲ್ಲಾ ಕಡೆ ಸಹಿಯನ್ನೂ ಮಾಡಿದ್ದಾರೆ ಆದರೆ ಒಂದು ಕಡೆ ಮಾತ್ರ ಸಹಿ ಮಾಡುವುದನ್ನು ಮರೆತಿದ್ದಾರೆ. ಈಗ ಇದನ್ನೇ ಮುಖ್ಯವಾಗಿಟ್ಟುಕೊಂಡು ಅವರ ನಾಮಪತ್ರ ತಿರಸ್ಕರಿಸಲು ದೂರು ಸಲ್ಲಿಸಲಾಗಿದೆ.
ರಾಮಲಿಂಗಾ ರೆಡ್ಡಿ ಅವರ ನಾಮಪತ್ರದ 13ನೇ ಪುಟದಲ್ಲಿ ಅವರ ಮೇಲಿರುವ ಪ್ರಕರಣಗಳ ಮಾಹಿತಿ ನೀಡುವ ಕಡೆ ರಾಮಲಿಂಗಾರೆಡ್ಡಿ ಅವರು ಸಹಿ ಹಾಕುವುದು ಮರೆತಿದ್ದಾರೆ. ಉಳಿದಂತೆ ಇನ್ನೆಲ್ಲಾ ಕಡೆ ಸಹಿ ಹಾಕಿದ್ದಾರೆ.












Click it and Unblock the Notifications