ಮೆಟ್ರೋ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಬೆಂಗಳೂರು ಹೆಣ್ಣು ಮಕ್ಕಳಿಗೆ ಎಷ್ಟು ಸೇಫ್ ಎಂದ ನೆಟ್ಟಿಗರು
ಬೆಂಗಳೂರು, ನವೆಂಬರ್ 22: ಇತ್ತೀಚಿಗೆ ಲುಲೂ ಮಾಲ್ ಅಲ್ಲಿ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿದ ವಿಚಾರ ಇನ್ನೂ ಮರೆಯಾಗಿಲ್ಲ ಅಷ್ಟರಲ್ಲಾಗಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ಹೌದು, ಬೆಂಗಳೂರು ಮೆಟ್ರೋದಲ್ಲಿ ಯುವತಿಯೋರ್ವೆ ಕಾಮುಕನಿಂದ ಲೈಂಗಿಕ ದೌರ್ಜನ್ಯ ಒಳಗಾದ ಘಟನೆ ಕಂಡು ಬಂದಿದೆ. ಸದ್ಯ ಇದೇ ವಿಚಾರ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಹೆಣ್ಣು ಮಕ್ಕಳಿಗೆ ಎಷ್ಟು ಸೇಫ್ ಅನ್ನೋ ಪ್ರಶ್ನೆಯನ್ನ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡ್ತಾ ಇದ್ದಾರೆ. ಯುವತಿಗೆ ನ್ಯಾಯ ಒದಗಿಸಿ ಕಿಡಿಗೇಡಿಗೆ ತಕ್ಕ ಶಾಸ್ತಿ ಮಾಡಬೇಕು ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಗಾದರೆ ಈ ರೀತಿ ಆಗಿದ್ದು ಹೇಗೆ?

ಯುವತಿಯ ಸ್ನೇಹಿತರು ಈ ಬಗ್ಗೆ ಸಾಮಾಜಿಕ ಜಾಲತಾಣ ರೆಡ್ಡಿಟ್ ಅಲ್ಲಿ ಬರೆದು ಕೊಂಡಿದ್ದು ಈ ಘಟನೆ ಹೇಗಾಯ್ತು ಅಂತ ವಿವರಿಸಿದ್ದಾರೆ. ಸ್ನೇಹಿತರು ಹೇಳೋ ಪ್ರಕಾರ ಸೋಮವಾರ ಬೆಳಗ್ಗೆ ಸುಮಾರು 8.30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಸದಾ ಜನಜಂಗುಳಿ ಇರುವ ಮೆಜೆಸ್ಟಿಕ್ ಮೆಟ್ರೋದಲ್ಲಿ ಈ ಘಟನೆ ಸಂಭವಿಸಿದೆ. ಆ ಯುವತಿ ಪ್ರತಿ ದಿನ ಕಾಲೇಜಿಗೆ ಬಸ್‌ನಲ್ಲೇ ತೆರಳುತ್ತಿದ್ದಳು.
ಆದರೆ ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಲು ಮೆಜೆಸ್ಟಿಕ್‌ಗೆ ಬಂದಿದ್ದಳು. ಮೆಟ್ರೊ ಏರುವಾಗ ದಟ್ಟಣೆಯಿತ್ತು, ಮೆಟ್ರೋ ಹತ್ತಿದ ನಂತರ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಸ್ಪರ್ಶಿಸಿದ್ದಾನೆ ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಅರಿವಾದಾದಗ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಸಹಪ್ರಯಾಣಿಕರು ನೆರವಿಗೆ ಬರದಿರುವುದು ಬೇಸರದ ಸಂಗತಿಯಾಗಿದೆ.
ಇನ್ನೂ ಈ ಬಗ್ಗೆ BMRCL ಅಧಿಕಾರಿಗಳು ನಮಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ, ದೂರು ಬಂದ್ರೆ ಕ್ರಮದ ಭರವಸೆ ಕೊಟ್ಟಿದ್ದಾರೆ. ಸೆ.9ರಂದು ನಗರದ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಪರ್ಸ್ ಸಹ ಕಳವು ಮಾಡಲಾಗಿತ್ತು. ಈ ಘಟನೆ ಕುರಿತು ಇದುವರೆಗೂ ಯಾರೂ ದೂರು ನೀಡಿಲ್ಲ. ನಿನ್ನೆ ರಾತ್ರಿವರೆಗೂ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ತಕ್ಷಣವೇ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಆದರೂ ಪದೇ ಪದೇ ಸಿಟಿಯಲ್ಲಿ ಈ ತರಹ ಪ್ರಕರಣ ದಾಖಲಾಗುತ್ತಿರುವ ವಿಚಾರ ನಿಜಕ್ಕೂ ಕೆಟ್ಟ ಬೆಳವಣಿಗೆ ಎನ್ನುವುದು ಬಹುತೇಕ ನೆಟ್ಟಿಗರ ಅಭಿಪ್ರಾಯ..












Click it and Unblock the Notifications