Lalbagh Flower Show: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ಬೆಂಗಳೂರು: ಕನ್ನಡ ನಾಡಿನ ಹೆಮ್ಮೆಯ ಸ್ಥಳಗಳ ಪೈಕಿ ಲಾಲ್‌ಬಾಗ್ ಕೂಡ ಒಂದಾಗಿದೆ. ಅದರಲ್ಲೂ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಜಗತ್ತಿನಾದ್ಯಂತ ಸೌಂಡ್ ಮಾಡುತ್ತದೆ. ಈ ಬಾರಿ ಕೂಡ ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಯಲ್ಲೇ ಫಲಪುಷ್ಪ ಪ್ರದರ್ಶನ ಸಡಗರ ಮೇಳೈಸಿದೆ. ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ ನೀಡಿದ್ದಾರೆ.
ಅಂದಹಾಗೆ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಸ್ಮರಣಾರ್ಥವಾಗಿ ಲಾಲ್ ಬಾಗ್‌ನಲ್ಲಿ, ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಲಾಲ್ ಬಾಗ್ ಇಡೀ ಜಗತ್ತಿನಲ್ಲೇ ಪ್ರಸಿದ್ದವಾದ ಉದ್ಯಾನವನ. ಸುಮಾರು 240 ಎಕರೆ ವಿಸ್ತೀರ್ಣವಿರುವ ಉದ್ಯಾನವನದಲ್ಲಿ ವಿವಿಧ ಬಗೆಯ ಮರಗಿಡಗಳಿವೆ. ಬ್ರಿಟೀಷರ ಕಾಲದಲ್ಲಿದ್ದ ಈ ಉದ್ಯಾನವನಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.

ಜಗತ್ತಿನ ಗಮನ ಸೆಳೆಯುವ ಪ್ರದರ್ಶನಕ್ಕೆ
ಇನ್ನು 140 ಎಕರೆ ಪ್ರದೇಶದಲ್ಲಿದ್ದ ಈ ಉದ್ಯಾನವನಕ್ಕೆ ಶ್ರೀ ಕೆಂಗಲ್ ಹನುಮಂತಯ್ಯ ಅವರು ಇನ್ನೂ 100 ಎಕರೆ ಪ್ರದೇಶ ಸ್ವಾಧೀನಪಡಿಸಿ, ಒಟ್ಟು 240 ಎಕರೆ ಪ್ರದೇಶದಲ್ಲಿ ಅತಿ ದೊಡ್ಡ ನಿರ್ಮಾಣಕ್ಕೆ ಕಾರಣರಾದರು. ಪ್ರತಿ ವರ್ಷದಂತೆಯೇ ಈ ವರ್ಷವೂ ಫಲಪುಷ್ಪ ಪ್ರದರ್ಶವನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರತಿವರ್ಷ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಕ್ಷಾಂತರ ಪ್ರವಾಸಿಗರು ವಿಸಿಟ್ ಕೊಡ್ತಾರೆ. ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಜಗತ್ತಿನ ವಿವಿಧ ಸ್ಥಳದಿಂದಲೂ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನ ಸಾಗರವೇ ಲಾಲ್‌ಬಾಗ್‌ಗೆ ಬರುತ್ತದೆ.
25 ಲಕ್ಷ ಬಗೆಯ ಹೂವುಗಳು
ಇನ್ನು ಲಾಲ್‌ಬಾಗ್‌ನ ಕೇಂದ್ರ ಬಿಂದು ಗಾಜಿನ ಮನೆಯಲ್ಲಿ 3.5 ಲಕ್ಷ ಬಗೆಬಗೆಯ ಹೂವಿನಲ್ಲಿ ವಿಧಾನಸೌಧ ತಲೆ ಎತ್ತಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಹೂವಿನ ವಿಧಾನಸೌಧ ಸೆಂಟರ್ ಆಫ್ ಅಟ್ರ್ಯಾಕ್ಷನ್. 2023ರ ಲಾಲ್‌ಬಾಗ್ ಫ್ಲವರ್ ಶೋನ ಮತ್ತೊಂದು ವಿಶೇಷವೆಂದರೆ ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳಿಗೆ ಗೇಟ್ ಪಾಸ್ ನೀಡಲಾಗಿದೆ. ದೇಶೀಯ ಹೂವುಗಳಿಗೆ ಮನ್ನಣೆ ನೀಡಲಾಗಿದ್ದು ಕೊಲ್ಕತ್ತಾ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಿಂದ ವಿಶಿಷ್ಟ ಹೂಗಳು ಬಂದಿವೆ. ಒಟ್ಟಾರೆ 20ರಿಂದ 25 ಲಕ್ಷ ಬಗೆಯ ಹೂವುಗಳು ಜನರ ಕಣ್ಮನ ಸೆಳೆಯಲು ಸಜ್ಜಾಗಿವೆ.

ಪಾರ್ಕಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ
ಲಕ್ಷಲಕ್ಷ ಜನರನ್ನ ಆಕರ್ಷಿಸುವ ಲಾಲ್‌ಬಾಗ್ ಫ್ಲವರ್ ಶೋ ಇಂದಿನಿಂದ ಅಂದ್ರೆ ಆಗಸ್ಟ್ 04ರಿಂದ ಆಗಸ್ಟ್ 15ರವರೆಗೆ ಒಟ್ಟಾರೆ 12 ದಿನ ನಡೆಯಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಫ್ಲವರ್ ಶೋಗೆ 2 ಕೋಟಿ ರೂಪಾಯಿಗು ಹೆಚ್ಚು ವೆಚ್ಚವಾಗಿದೆ. ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸುಮಾರು 10ರಿಂದ 12 ಲಕ್ಷದಷ್ಟು ಜನ ಆಗಮಿಸುವ ನಿರೀಕ್ಷೆಯಿದೆ. ಫ್ಲವರ್ ಶೋ ವೀಕ್ಷಣೆಗಾಗಿ ಲಾಲ್‌ಬಾಗ್‌ಗೆ ಬರುವವರಿಗೆ 4 ಕಡೆ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲವೆಡೆ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಿ ಟ್ರಾಫಿಕ್ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ಮಾಹಿತಿ
ಇನ್ನು ಇದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು. 12 ವಾರಗಳೊಳಗೆ ವಾರ್ಡ್ ವಿಂಗಡನೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಇನ್ನು ಅದಾದ ನಂತರ ನ್ಯಾಯಾಲಯ ಬಹುತೇಕ ಬಿಬಿಎಂಪಿ ಚುನಾವಣೆ ಕೈಗೊಳ್ಳಲು ಸೂಚಿಸುತ್ತದೆ. ಹಾಗಾಗಿ ನಾವು ಬಿಬಿಎಂಪಿ ಚುನಾವಣೆಯನ್ನು ನಡೆಸೋದಕ್ಕೆ ತಯಾರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಬಿಬಿಎಂಪಿಗೆ ಯಾವಾಗ ಚುನಾವಣೆ ನಡೆಯುತ್ತೆ? ಅಂತಾ ಕಾಯುತ್ತಿದ್ದ ಬೆಂಗಳೂರಿಗರಿಗೂ ಸಿಹಿಸುದ್ದಿ ಸಿಕ್ಕಂತಾಗಿದೆ.












Click it and Unblock the Notifications