ಲಜ್ಜಗೇಡಿ ಸಿಎಂ ಎಂದ ಕುಮಾರಸ್ವಾಮಿಗೆ ಶೀಘ್ರ ಗುಣಮುಖರಾಗಲು ಹಾರೈಸಿದ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 08: ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಸೋಲಿನ ಆಘಾತದಿಂದ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ಇತ್ತೀಚೆಗೆ ನೀವು (ಎಚ್‌ಡಿ ಕುಮಾರಸ್ವಾಮಿ) ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು ಮತ್ತು ಬಳಸುತ್ತಿರುವ ಭಾಷೆಯನ್ನು ಗಮನಿಸಿದ್ದೇನೆ. ಚುನಾವಣಾ ಸೋಲಿನ ಆಘಾತದಿಂದಾಗಿ ನೀವು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ ಎಂದು ಕುಟುಕಿದ್ದಾರೆ.

ಇನ್ನು ಕುಮಾರಸ್ವಾಮಿಯವರು ತಾವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ-ಅಸಲಿ ವಿಚಾರ ಶೀಘ್ರದಲ್ಲಿಯೇ ತನಿಖೆಯಿಂದ ಹೊರಬೀಳಲಿದೆ ಎಂದು ಅವರು ಉತ್ತರಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಹಾಗೂ ಹಾಲಿ ಸಿಎಂ ವಾಕ್ಸಮರ ಮುಂದುವರಿಯುವಂತೆ ಕಾಣುತ್ತಿದೆ.
ಕಟುಶಬ್ದಗಳಿಂದ ಕುಮಾರಸ್ವಾಮಿ ಟೀಕೆ
ಕೃಷಿ ಸಚಿವ ಚೆಲುವರಾಯಸ್ವಾಮಿ ಲಂಚ ಪಡೆದಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆದರೆ ಸಚಿವರು ಇದನ್ನು ಆರೋಪ, ಸಂಚು ಎಂದಿದ್ದಾರೆ. ಇದೇ ವಿಚಾರವನ್ನು ಜೆಡಿಎಸ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು.
ಸಚಿವರ ಮಾನಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಲಜ್ಜೆಗೇಡಿ ಎಂದು ಅವರು ಕರೆದಿದ್ದಾರೆ. ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ 'ಸಿದ್ದಕಲೆ' ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ ಎಂದರು.

ನಕಲಿ ಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು
ಸಚಿವರ ವಿರುದ್ಧದ ಪತ್ರ ನಕಲಿ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ?. ಸುಳ್ಳು ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ ಎಂದು ಅವರು ಪ್ರಶ್ನಿಸಿದ್ದರು.
ಬೇರೆಯವರ ಭುಜದ ಮೇಲೆ ಬಂದೂಕನ್ನಿಟ್ಟು ಮತ್ತೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ 'ಎತ್ತುವಳಿ ಗಿರಾಕಿ'ಗೆ ನಕಲಿ ಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು ಎಂದು ಜರಿದಿದ್ದರು. ಕಾಂಗ್ರೆಸ್ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರ ಪತ್ರವೇನ್ನೇ ನಕಲಿ ಎಂದು ಬಿಂಬಿಸಿದ 'ನಕಲಿರಾಮ'ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ ಎಂದೆಲ್ಲ ಕಾಂಗ್ರೆಸ್ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿದ್ದರು. ಅದಕ್ಕೆ ಸಿದ್ದರಾಮಯ್ಯನವರು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.












Click it and Unblock the Notifications