CJ Roy Suicide Case: ಸಿಜೆ ರಾಯ್ ಕೇಸ್ ಆತ್ಮಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ರಚನೆ
CJ Roy Suicide Case: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ದಳ (SIT) ರಚಿಸಲಾಗಿದೆ. ಪ್ರಕರಣದ ಹಿಂದೆ ಯಾವುದೇ ಬಾಹ್ಯ ಒತ್ತಡ, ವಿಶೇಷವಾಗಿ ಐಟಿ ದಾಳಿ ಸಂಬಂಧಿತ ಕಾರಣಗಳಿವೆಯೇ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ.
ವಿಶೇಷ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ?: ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನಿರ್ದೇಶನದಂತೆ, ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯಾರಂಭ ಮಾಡಲಿದೆ. ಈ ವಿಶೇಷ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್‌ಬಿ ಎಸಿಪಿ ರಾಮಚಂದ್ರ ಹಾಗೂ ಅಶೋಕನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿ ಸದಸ್ಯರಾಗಿ ಸೇರಿದ್ದಾರೆ.

ಎಸ್‌ಐಟಿ ಮೊದಲು ಮಾಡುವ ಕೆಲಸಗಳು: ಸಿಜೆ ರಾಯ್ ಅವರ ಆತ್ಮಹತ್ಯೆಗೆ ಐಟಿ ರೈಡ್‌ಗಳಿಂದ ಉಂಟಾದ ಒತ್ತಡವೇ ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಎಲ್ಲಾ ಅಂಶಗಳನ್ನು ಎಸ್‌ಐಟಿ ಗಂಭೀರವಾಗಿ ಪರಿಶೀಲಿಸಲಿದೆ. ಮೃತ ಸಿಜೆ ರಾಯ್ ಅವರ ಮೊಬೈಲ್ ಫೋನ್‌ಗಳ ತಾಂತ್ರಿಕ ಪರಿಶೀಲನೆ, ಕರೆ ವಿವರಗಳು, ಸಂದೇಶಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತದೆ.
ಅದೇ ವೇಳೆ, ಹಣಕಾಸು ವ್ಯವಹಾರಗಳು, ವ್ಯವಹಾರಿಕ ಒತ್ತಡಗಳು, ವೈಯಕ್ತಿಕ ಜೀವನದ ಹಿನ್ನೆಲೆ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ. ಯಾವುದೇ ಅನುಮಾನಾಸ್ಪದ ಅಂಶಗಳು ಪತ್ತೆಯಾದರೆ, ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದ್ದು, ಎಸ್‌ಐಟಿ ವರದಿಯ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications