'ಸಿಬಿಐ ಬೇಡ ಸಿಐಡಿಯಿಂದಲೇ ತನಿಖೆಯಾಗಲಿ'
ಪ್ರಮಾಣಿಕ, ಸಜ್ಜನ, ಸರಳ ಅಧಿಕಾರಿ ಎಂದು ಹೆಸರಾಗಿದ್ದ ಡಿ.ಕೆ ರವಿಯವರು ತೀರಿಕೊಂಡಿದ್ದಾರೆ. ತಮ್ಮ ಅಪಾರ್ಟ್ಮೆಂಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದ ಇವರ ದೇಹವನ್ನು ಕಂಡ ನಂತರ ಈ ಸಾವು ಅನುಮಾನಾಸ್ಪದವೆನ್ನಲಾಗಿದೆ.
ಐಎಎಸ್ ಅಧಿಕಾರಿಯಾಗಿದ್ದ ಇವರು ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅನೇಕ ತೆರಿಗೆಗಳ್ಳರನ್ನು ಬಯಲು ಮಾಡುತ್ತಿದ್ದರು ಮತ್ತು ಪ್ರಾಮಾಣಿಕರೂ ದಕ್ಷರೂ ಆಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಇವರ ಸಾವು ಆತ್ಮಹತ್ಯೆಯಲ್ಲಾ ಕೊಲೆ ಎಂಬ ಕೂಗೆದ್ದಿದೆ. ರವಿಯವರ ಅಪಾರ ಅಭಿಮಾನಿಗಳು ಭಾವುಕರಾಗಿ ಕಣ್ಣೀರಿಡುತ್ತಿರುವುದು ಒಂದೆಡೆಯಾದರೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದಾಳ ಉರುಳಿಸಲು ಶುರುಮಾಡಿವೆ.
ರಾಜ್ಯ ಸರ್ಕಾರದ ಮಂತ್ರಿಯೊಬ್ಬರ ತೆರಿಗೆಗಳ್ಳತನವನ್ನು ಬಯಲಿಗೆ ಎಳೆದಿದ್ದಕ್ಕಾಗಿ ರವಿಯವರನ್ನು ಕೊಲ್ಲಲಾಗಿದೆ ಎಂಬ ಆರೋಪವನ್ನು ಹೊರಿಸಲಾಗುತ್ತಿದೆ. ಕೇಂದ್ರದಲ್ಲಿರುವ ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಈ ಸಾವಿಗೆ ಕೇಂದ್ರ ಸರ್ಕಾರವನ್ನು ಹೊಣೆ ಮಾಡಿ ಮಾತಾಡಿದ್ದಾರೆ. ಸದರಿ ಸಾವಿನ ತನಿಖೆಯಂತೂ ಆಗಲಿದೆ. ಸಹಜವಾಗಿ ಇದನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದೆ. ಆದರೆ ವಿರೋಧ ಪಕ್ಷವಾದ ಬಿಜೆಪಿಯು ತನಿಖೆಯನ್ನು ಕೇಂದ್ರೀಯ ತನಿಖಾ ದಳವಾದ ಸಿಬಿಐಗೆ ಒಪ್ಪಿಸುವಂತೆ ತಾಕೀತು ಮಾಡುತ್ತಿದೆ. ಇದಕ್ಕೆ ಕಾರಣವಾಗಿ ಆರೋಪಿತ ಮಂತ್ರಿಯೇ ತನಿಖಾ ಸಂಸ್ಥೆಯ ಮಂತ್ರಿ ಎಂಬುದಾಗಿದ್ದು ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂಬ ಕಾರಣ ನೀಡಿ ಸಿಬಿಐಗೆ ಒಪ್ಪಿಸಲು ಒತ್ತಾಯಿಸುತ್ತಿದೆ. ನಿಧಾನವಾಗಿ ಎಲ್ಲೆಡೆ ಪ್ರತಿಭಟನೆ ಮಾಡುವ ಮೂಲಕ ರಾಜ್ಯಸರ್ಕಾರ ಪ್ರಾಮಾಣಿಕ ಅಧಿಕಾರಿಗಳ ಶತ್ರು ಎಂಬ ಇಮೇಜ್ ಹುಟ್ಟುಹಾಕಲು ಪ್ರಯತ್ನಮಾಡುತ್ತಿದೆ. [ಡಿಕೆ ರವಿ ಮಾವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?]

ಕಾನೂನು ಸುವ್ಯವಸ್ಥೆ, ಪೊಲೀಸ್ ರಾಜ್ಯಸರ್ಕಾರದ ಹೊಣೆಯಾದ್ದರಿಂದ ನ್ಯಾಯವಾಗಿ ಈ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದೇ ಸರಿಯಾಗಿದೆ. "ಸಿಐಡಿ ಮೇಲೆ ನಂಬಿಕೆಯಿಲ್ಲ" ಎನ್ನುವ ಸಂದೇಶ ನೀಡುವಂತೆ ನಡೆದುಕೊಳ್ಳುವುದು ರಾಜ್ಯದ ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆತರುವಂಥದ್ದಲ್ಲಾ.. ಇದು ಹೊಣೆಗೇಡಿತನದ ನಿಲುವು. ಬಿಜೆಪಿಯವರು ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಕಾರಣದಿಂದಲೇ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು "ಪಕ್ಕಾ ರಾಜಕೀಯ". [ರವಿ ಪ್ರಕರಣ ಸಿಬಿಐಗೆ ವಹಿಸಿ: ಪ್ರಧಾನಿಗೆ ಪತ್ರ]
ಇದೇ ಪಕ್ಷದವರು ಹಿಂದೆ ಇದೇ ಸಿಬಿಐ ಕುರಿತು "ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್" ಎಂದಿರಲಿಲ್ಲವೇನು? ಸುಪ್ರಿಂಕೋರ್ಟ್ ಕೂಡಾ ಸಿಬಿಐ ಬಗ್ಗೆ ಪಂಜರದ ಹಕ್ಕಿ ಎಂದಿದ್ದನ್ನು ನೆನಪಲ್ಲಿಟ್ಟುಕೊಳ್ಳೋಣ. ನಿನ್ನೆ ಸಿಬಿಐ ಮೇಲೆ ಅಪನಂಬಿಕೆ ತೋರಿದ್ದ ಬಿಜೆಪಿ ಹಾಗೂ ನಂಬಿಕೆ ತೋರಿದ್ದ ಕಾಂಗ್ರೆಸ್, ಇಂದು ಸಿಐಡಿ ಸಂಸ್ಥೆಯ ಮೇಲೆ ಅಪನಂಬಿಕೆ ತೋರಿಸುತ್ತಿರುವ ಬಿಜೆಪಿ ಮತ್ತು ನಂಬಿಕೆ ತೋರುತ್ತಿರುವ ಕಾಂಗ್ರೆಸ್ ಪಕ್ಷಗಳ ನಿಲುವುಗಳೇ ಈ ಎರಡೂ (ಮೂರನೆಯದಿದ್ದರೆ ಅದೂ) ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ತನಿಖಾಸಂಸ್ಥೆಗಳನ್ನು ಹೇಗೆ ಬಳಸುತ್ತವೆ ಎಂಬುದನ್ನು ತೋರಿಸುತ್ತದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಈ ಹಿನ್ನೆಲೆಯಲ್ಲಿ ನೋಡಿದಾಗ ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸದೆ ಇರುವುದು ಬಹಳ ಮುಖ್ಯವಾದ್ದರಿಂದ ಸಿಐಡಿ ತನಿಖೆಯನ್ನೇ ಒಪ್ಪುವುದು ಒಳಿತು. ಆದರೆ ಸದರಿ ತನಿಖೆ ನಿಷ್ಪಕ್ಷವಾಗಿ ನಡೆಯಲು ಯಾವ ದಾರಿ, ಮಾದರಿ ಅನುಸರಿಸಬೇಕೆಂದು ಯೋಚಿಸಿ ಸರಿಯಾದ "checks & Balances" ಇಟ್ಟುಕೊಳ್ಳುವುದು ಒಳಿತು. [ರವಿಗೆ ಕೊನೆಯ ಕರೆ ಮಾಡಿದ್ದಾರು?]
ತನಿಖಾ ಸಂಸ್ಥೆಗಳ ಸ್ವಾಯತ್ತತೆ ಬರೀ ಪುಸ್ತಕದ ಮಾತಾಗಿ, ಪ್ರತಿಯೊಂದು ರಾಜಕೀಯ ಪಕ್ಷವೂ ತನ್ನಿಷ್ಟದಂತೆ ಅವನ್ನು ಕುಣಿಸುವ ವ್ಯವಸ್ಥೆ ಸುಧಾರಿಸದಿದ್ದರೆ ಯಾವ ತನಿಖಾತಂಡವಾದರೂ ನಿಷ್ಪಕ್ಷಪಾತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅಲ್ಲಗಳೆಯಾಗುವುದೇ? ಇಂದು ಸಿಐಡಿ ಬೇಡ - ಸಿಬಿಐ ಬೇಕು ಎನ್ನುವವರು.. ನಾಳೆ ಸಿಬಿಐ ಬೇಡಾ ಎಫ಼್ಬಿಐ ಬೇಕು ಎನ್ನಬಹುದಲ್ಲವೇ? ದುರಂತವೆಂದರೆ ಇದೇ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಶಂಕರ್ ಬಿದರಿಯವರೇ ತನಿಖೆಯನ್ನು ನೆರೆರಾಜ್ಯದ ಪೊಲೀಸ್ ತನಿಖಾಸಂಸ್ಥೆಗೆ ಒಪ್ಪಿಸುವಂತೆ ನಾಚಿಕೆಗೆಟ್ಟು ಹೇಳಿರುವುದು ಅವರೆಷ್ಟು ಪ್ರಾಮಾಣಿಕರಾಗಿದ್ದರು ಎಂಬುದನ್ನು ತೋರಿಸುತ್ತದೆ!












Click it and Unblock the Notifications