Winter: ಯಪ್ಪಾ... ಚಳಿ....! ಬೆಂಗಳೂರಿನಲ್ಲಿ ಟೀ, ಕಾಫಿ, ಕರಿದ ತಿಂಡಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು....
ಬೆಂಗಳೂರು ಜನವರಿ 4: ಈಗಷ್ಟೇ ಮಾಡಿದ ಅಡುಗೆ ಹತ್ತು ನಿಮಿಷದಲ್ಲಿ ತಣ್ಣಗಾಗಿ ಹೋಗುತ್ತೆ, ನೀರು ಕುಡಿದರೆ ಗಂಟಲು ಕಿಚ್ ಕಿಚ್ ಎನ್ನುತ್ತೆ, ಗಾಳಿ ಬೀಸಿದರೆ ಓಡಿ ಹೋಗಿ ಅವಿತುಕೊಳ್ಳುವ ಮನಸ್ಸಾಗುತ್ತೆ, ಮನೆ ಬಿಟ್ಟು ಹೊರ ಬರಲು ಮನಸ್ಸು ಬೇಡ ಅನ್ನುತ್ತೆ ಇವು ಚಳಿಗಾಲದಲ್ಲಾಗುವ ಅನುಭವಗಳು. ಈ ಸಮಯದಲ್ಲಿ ಶಕ್ತಿ ನೀಡುವ ತ್ವರಿತವಾಗಿ ಮೈಂಡ್ ರಿಫ್ರೆಶ್ ಮಾಡುವ ಪಾನೀಯಗಳಿಗೆ ಹಾಗೂ ತಿಂಡಿಗಳಿಗೆ ಜನ ಮೊರೆ ಹೋಗುತ್ತಾರೆ.
ಬೆಂಗಳೂರಿನ ಸ್ಥಿತಿ ಸದ್ಯ ಹೀಗೆ ಆಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಮೈಕೊರೆಯುವ ಚಳಿ ಹೆಚ್ಚಾಗುತ್ತಿದೆ. ಚಳಿಗೆ ಜನ ನಡುಗುತ್ತಿದ್ದಾರೆ. ಬೆಳಿಗ್ಗೆ ಹತ್ತು ಗಂಟೆಯಾದರೂ ಸೂರ್ಯ ಕಾಣಿಸುತ್ತಿಲ್ಲ. ಒಂದು ವೇಳೆ ಸೂರ್ಯ ಕಂಡರೂ ಅದರ ಬಿಸಿ ಮೈ ತಾಗುತ್ತಿಲ್ಲ. ತಂಪು ಗಾಳಿಗೆ ಜನ ಮುದುಡಿ ಹೋಗಿದ್ದಾರೆ. ಸಂಜೆ ಐದಾಗುತ್ತಿದ್ದಂತೆ ಚಳಿ ಹೆಚ್ಚಾಗುತ್ತಿದೆ. ರಾತ್ರಿ ಮಲಗಿದರೆ ಬೆಳಿಗ್ಗೆ ಎದ್ದೇಳಲಾಗುತ್ತಿಲ್ಲ. ರಾತ್ರಿ ಹೊತ್ತು ಎಂಟು ಗಂಟೆ ನಂತರ ಮನೆಯಿಂದ ಹೊರಗಿರಲು ಮಂಜು ಕವಿದ ವಾತಾವರಣ ಬಿಡುತ್ತಿಲ್ಲ.

ಹೀಗೆ ಬೆಳಿಗ್ಗೆ ವಾಕಿಂಗ್, ಜಾಗಿಂಗ್, ಕೆಲಸ ಹಾಗೂ ಶಾಲೆಗೆ ಹೋಗುವ ಮಕ್ಕಳ ಕಥೆಯಂತೂ ಹೇಳುವ ಹಾಗೇ ಇಲ್ಲ. ಕೆಲವರು ಫುಲ್ ಪ್ಯಾಕ್ ಮಾಡಿಕೊಂಡು ಹೊರ ಬಂದರೆ, ಇನ್ನೂ ಕೆಲವರು ಈ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಜನ ಈ ಚಳಿಗೆ ಬಿಸಿ ಬಿಸಿ ಕರಿದ ತಿಂಡಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ದಿನವಿಡೀ ಟೀ, ಕಾಫಿ, ಕರಿದ ತಿಂಡಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ.
ಕರಿದ ತಿಂಡಿಗಳಿಗೆ ಹೆಚ್ಚಿದ ಬೇಡಿಕೆ
ಅಂಗಡಿ ಚಿಕ್ಕದಿರಲ್ಲಿ ದೊಡ್ಡದಿರಲ್ಲಿ ಬಿಸಿ ಬಿಸಿ ಬಜ್ಜಿ, ವಡೆ, ಪಕೋಡಾ ಹೀಗೆ ಕರಿದ ತಿಂಡಿಗಳು ಸಿಕ್ಕರೆ ಸಾಕು ಜನ ಮುಗಿಬಿದ್ದು ತಿನ್ನುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಸಂಜೆ ಹೊತ್ತು ಕರಿದ ತಿಂಡಿಗಳನ್ನು ಹುಡುಕಿಕೊಂಡು ಹೋಗಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಬಜ್ಜಿ, ಬೊಂಡಾ, ಪಕೋಡಾ, ವಡೆಗೆ ದಿನ ನಿತ್ಯ ಬೇಡಿಕೆ ಹೆಚ್ಚಾಗುತ್ತಿದೆ.
ಬೀದಿ ಬದಿ ಒಂದು ಪ್ಲೇಟ್ ಬಜ್ಜಿ, ಬೊಂಡಾ, ಪಕೋಡಾ, ವಡೆಗೆ 30ರಿಂದ 50 ರೂಪಾಯಿ ಇದೆ. ಹೋಟೆಲ್‌ಗಳಲ್ಲಾದರೆ ಇದರ ಬೆಲೆ 60 ರಿಂದ 150 ರೂಪಾಯಿವರೆಗೆ ಇದೆ. ಮೆಣಸಿನ ಕಾಯಿ, ಆಲುಗಡ್ಡೆ, ಕ್ಯಾಪ್ಸಿಕಂ, ಬಾಳೆಕಾಯಿ, ಹೀರೆಕಾಯಿ ಹೀಗೆ ವಿವಿಧ ಬಜ್ಜಿಗಳನ್ನು ಜನ ತಮಗಿಷ್ಟಕ್ಕನುಸಾರವಾಗಿ ಖರೀದಿಸಿ ಸವಿಯುತ್ತಿದ್ದಾರೆ.

ಇನ್ನೂ ಈರುಳ್ಳಿ, ಹೂಕೋಸು, ಪಾಲಕ್, ಮೆಂತೆ ಸೊಪ್ಪು ಹೀಗೆ ನಾನಾ ಪಕೋಡಾಗಳನ್ನೂ ಜನ ಖರೀದಿಸಿ ತಿನ್ನುತ್ತಿದ್ದಾರೆ. ಅಲ್ಲದೆ ಆಲು ಬೊಂಡಾ, ಗೋಬಿ ಬೊಂಡಾ, ಎಲೆಕೋಸು ಬೊಂಡಾದಲ್ಲೂ ವಿಧವಾದ ಬೊಂಡಾಗಳನ್ನು ಜನ ಬಾಯಿ ಚಪ್ಪರಿಸಿ ತಿನ್ನುತ್ತಿದ್ದಾರೆ. ಹೀಗೆ ಚುಮು ಚುಮು ಚಳಿಗೆ ಬಿಸಿ ಬಿಸಿ ಕರಿದ ತಿಂಡಿಗಳಿಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಾಗಿದ್ದು ಸುಳ್ಳಲ್ಲ.
ಟೀ ಹಾಗೂ ಕಾಫಿ ಅಂಗಡಿ ಮುಂದೆ ಜನವೋ ಜನ...
ಇನ್ನೂ ಟೀ ಹಾಗೂ ಕಾಫಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸಮಯ. ಬೆಳಗಾದರೆ ಸಾಕು ಒಂದು ಕಪ್ ಟೀನೋ ಕಾಫಿನೋ ಕುಡಿದು ದಿನ ಆರಂಭವಿಸುವ ಜನರು ನಮ್ಮಲ್ಲಿ ಸಾಕಷ್ಟಿದ್ದಾರೆ. ಈ ಚಳಿಗಾಲದಲ್ಲಿ ಟೀ ಕಾಫಿ ಕುಡಿಯುವುದರಲ್ಲಿರುವ ಮಜಾನೇ ಬೇರೆ. ಚಳಿಗಾಲದಲ್ಲಿ ತಕ್ಷಣ ಮೈಂಡ್ ಫ್ರೆಶ್ ಆಗಬೇಕು, ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಬೇಕು ಅಂದ್ರೆ ಅದು ಒಂದು ಕಪ್ ಟೀ ಹಾಗೂ ಕಾಫಿಯಿಂದ ಮಾತ್ರ ಸಾಧ್ಯ. ಹೀಗಾಗಿ ಬೆಂಗಳೂರಿನಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಟೀ ಸ್ಟಾಲ್‌ಗಳ ಮುಂದೆ ಕಂಡುಬರುತ್ತಿದ್ದಾರೆ. ತಮ್ಮ ನೆಚ್ಚಿನ ಪಾನೀಯ ಕುಡಿದು ಆನಂದಿಸುತ್ತಿದ್ದಾರೆ.
ಅಂದಹಾಗೆ ಬೀದಿ ಬದಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಒಂದು ಕಪ್ ಟೀ ಹಾಗೂ ಕಾಫಿ ಬೆಲೆ 10 ಯಿಂದ 20 ರೂಪಾಯಿ ಇದೆ. ಹೋಟೆಲ್‌ಗಳಲ್ಲಿ 30ರಿಂದ 50ರೂಪಾಯಿ ಇದ್ದರೆ, ಮಾಲ್, ವಿಮಾನ ನಿಲ್ದಾಣ, ಸಿನಿಮಾ ಮಂದಿರಗಳಲ್ಲಿ ಇದರ ಬೆಲೆ 150-500 ರೂಪಾಯಿವರೆಗೂ ಇದೆ. ಚಳಿಯಿಂದ ಬೆಚ್ಚಗಾಗಲು ಟೀ ಕಾಫಿ ಬೆಲೆ ಎಷ್ಟೇ ದುಬಾರಿ ಆದರೂ ತಮ್ಮವರೊಂದಿಗೆ ಆನಂದಿಸುತ್ತಿದ್ದಾರೆ.

ಇನ್ನೂ ಪುದೀನಾ, ಮಸಾಲೆ, ಶುಂಠಿ, ಜಿಂಜರ್, ಇಲಾಚಿ ಹೀಗೆ ನಾನಾ ಟೀಗಳಿಗೆ ಬೇಡಿಕೆ ಹೆಚ್ಚಿದೆ. ಹೀಗೆ ಚಳಿ ಹಾಗೂ ತಂಪಾದ ಗಾಳಿ ಸಿಲಿಕಾನ್ ಸಿಟಿಯಲ್ಲಿ ಜನ ಬಿಸಿ ಬಿಸಿ ಟೀ, ಕಾಫಿ ಹಾಗೂ ಕರಿದ ತಿಂಡಿಗಳನ್ನು ಬಯಸುವಂತೆ ಮಾಡಿದೆ. ಅದೇನೇ ಇದ್ದರೂ ಬೆಂಗಳೂರಿಗರು ಈ ಅಹ್ಲಾದಕರ ವಾತಾವರಣವನ್ನು ಸಂತೋಷದಿಂದ ಆನಂದಿಸುತ್ತಿರುವುದು ಮಾತ್ರ ಸುಳ್ಳಲ್ಲ.












Click it and Unblock the Notifications