ಸಮಾಜದಲ್ಲಿ ಸನಾತನ ಸಂಸ್ಕೃತಿಯ ಹಸಿವು ಸ್ಪಷ್ಟ: ರಾಘವೇಶ್ವರ ಶ್ರೀ
ಬೆಂಗಳೂರು, ಸೆ 14: "ಭಾರತೀಯತೆಯ, ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಇಂದು ಸಮಾಜದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸಮಾಜಕ್ಕೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನ ದೊರಕಿದಲ್ಲಿ ಮಾತ್ರ ಭಾರತ ವಿಶ್ವಗುರುವಾಗಬಲ್ಲದು" ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನುಡಿದರು.
ನಗರದ ಗಿರಿನಗರ ರಾಮಾಶ್ರಯದಲ್ಲಿ ಶನಿವಾರ (ಸೆ. 14) ನಡೆದ ರಾಮಾಯಣ ಚಾತುರ್ಮಾಸ್ಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುತ್ತಾ, " ಶ್ರೀರಾಮದೇವರು ಪ್ರತಿಯ ಈ ಬಾರಿಯ ಚಾತುರ್ಮಾಸ್ಯವನ್ನು ರಾಮಾಯಣ ಚಾತುರ್ಮಾಸ್ಯವಾಗಿ ಆಚರಿಸಲಾಗಿದ್ದು, ನಿರಂತರವಾಗಿ ಧಾರಾ ರಾಮಾಯಣ ಪ್ರವಚನ ನಡೆದಿದೆ" ಎಂದು ಹೇಳಿದರು.
" ರಾಮಾಯಣ ಸರ್ವವೇದಗಳ ಸಾರ; ಇದು ಗುರು-ಶಿಷ್ಯರ ನಡುವಿನ ಬಾಂಧವ್ಯ ಬೆಸೆಯಲು ಸಹಕಾರಿ. ಅರುವತ್ತು ದಿನಗಳ ಕಾಲ ನಿರಂತರವಾಗಿ ನಡೆದ ಧಾರಾ ರಾಮಾಯಣ, ಗುರು-ಶಿಷ್ಯರ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದೆ" ಎಂದು ಶ್ರೀಗಳು ಬಣ್ಣಿಸಿದರು.

" ಭಾರತದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದ ವಿಶ್ವವಿದ್ಯಾಪೀಠದ ಸ್ಥಾಪನೆಗೆ ಸಂಕಲ್ಪಿಸಿ ನಡೆಸಿದ ಈ ಧಾರಾ ರಾಮಾಯಣ ಸಾರ್ಥಕವಾಗುವುದು ಶ್ರೀಸಂಕಲ್ಪ ಕೈಗೂಡಿದಾಗ ಎಂದು" ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
" ಶ್ರೀಮಠಕ್ಕೆ ಸಂಕಷ್ಟಗಳು ಎದುರಾದಾಗಲೂ ಶಿಷ್ಯಭಕ್ತರು ಗಟ್ಟಿಯಾಗಿ ಮಠದ ಪರವಾಗಿ ನಿಂತುಕೊಂಡಿದ್ದು, ಇದು ದೊಡ್ಡ ಶಕ್ತಿ. ಇದರ ಫಲವಾಗಿಯೇ ಈ ಬಾರಿಯ ಚಾತುರ್ಮಾಸ್ಯ ನಿರ್ವಿಘ್ನವಾಗಿ ನಡೆದಿದೆ" ಎಂದು ಶ್ರೀಗಳು ಹೇಳಿದರು.
ಚಾತುರ್ಮಾಸ್ಯ ಇರುವುದೇ ಚೈತನ್ಯ ಸಂಗ್ರಹಕ್ಕೆ; " ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲದೇ ಗೃಹಸ್ಥರಿಗೂ ಇದು ಅನ್ವಯಿಸುತ್ತದೆ. ಶಕ್ತಿಸಂಚಯನಕ್ಕೆ ಚಾತುರ್ಮಾಸ್ಯ ಪ್ರಶಸ್ತ ಕಾಲ. ಈ ಬಾರಿಯಂತೂ ವೇದಗಳ ಸಾರವಾದ ರಾಮಾಯಣದ ಮೂಲಕ ಈ ಕಾರ್ಯ ಮತ್ತಷ್ಟು ಚೆನ್ನಾಗಿ ನಡೆದಿದೆ ಎಂದು ಶ್ರೀಗಳು ಹೇಳಿದರು.
" ಚಾರ್ತುಮಾಸ್ಯ ನಿರ್ವಿಘ್ನವಾಗಿ, ಸುವ್ಯವಸ್ಥಿತವಾಗಿ, ವೈಭವೋಪೇತವಾಗಿ ನಡೆದಿದೆ. ಶ್ರೀಮಠದ ಇತಿಹಾಸಲ್ಲೇ ಮೊದಲ ಬಾರಿಗೆ ಎರಡು ತಿಂಗಳ ಪರ್ಯಂತ ಶ್ರೀರಾಮದೇವರಿಗೆ ಸುವರ್ಣ ಮಂಟಪದಲ್ಲಿ ಪೂಜಾಸೇವೆ ನೆರವೇರಿತು. ಸಾವಿರಾರು ಶಿಷ್ಯಭಕ್ತರಿಗೆ ಸೇವೆ ಮಾಡುವ ಅವಕಾಶ ಲಭಿಸಿದೆ" ಎಂದು ರಾಘವೇಶ್ವರ ಶ್ರೀಗಳು ಬಣ್ಣಿಸಿದರು.












Click it and Unblock the Notifications