ಡ್ರಗ್ಸ್ ಪ್ರಕರಣದ ತನಿಖೆ; 9ನೇ ಆರೋಪಿ ಬಂಧಿಸಿದ ಸಿಸಿಬಿ
ಬೆಂಗಳೂರು, ಅಕ್ಟೋಬರ್ 15: ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಚಿಕ್ಕಮಗಳೂರಿನಲ್ಲಿ 9ನೇ ಆರೋಪಿ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನದಿಂದ ಆರೋಪಿ ತಲೆಮರೆಸಿಕೊಂಡಿದ್ದ.
ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಿದ್ದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾಗಿರುವ ರವಿಶಂಕರ್ ಸ್ನೇಹಿತ ಈ ಅಶ್ವಿನ್.
ಪ್ರಕರಣದ 8ನೇ ಆರೋಪಿ ಅಭಿಸ್ವಾಮಿ ಮೂಲಕ ರವಿಶಂಕರ್‌ಗೆ ಅಶ್ವಿನ್ ಪರಿಚಯವಾಗಿದ್ದ. ಡ್ರಗ್ಸ್ ಪೂರೈಕೆ ಮಾಡುವುದರಿಂದ ಹಣಗಳಿಸಬಹುದು ಎಂದು ತಿಳಿದ ಅಶ್ವಿನ್ ಪೂರೈಕೆ ಜಾಲದೊಳಕ್ಕೆ ಇಳಿದಿದ್ದ.

ನೈಜೀರಿಯನ್ ಪೆಡ್ಲರ್‌ಗಳ ಜೊತೆ ಅಶ್ವಿನ್ ನಿರಂತರವಾಗಿ ಸಂಪರ್ಕ ಹೊಂದಿದ್ದ. ಅವರಿಂದ ಡ್ರಗ್ಸ್ ಪಡೆದು ಪಾರ್ಟಿಗಳಿಗೆ ಮತ್ತು ಬೇಡಿಕೆ ಇಟ್ಟ ವ್ಯಕ್ತಿಗಳಿಗೆ ಪೂರೈಕೆ ಮಾಡುತ್ತಿದ್ದ.
ದೆಹಲಿಯಿಂದ ಬೆಂಗಳೂರಿಗೆ ಬಂದ ಜನರು ಡ್ರಗ್ಸ್‌ಗಾಗಿ ಅಶ್ವಿನ್‌ಗೆ ಕರೆ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹ ಮಾಡಿದ್ದರು. ಎಫ್‌ಐಆರ್‌ನಲ್ಲಿ ಆತನನ್ನು 9ನೇ ಆರೋಪಿಯಾಗಿ ಮಾಡಿದ್ದರು.
ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದ ತನಿಖೆ ಚುರುಕುಗೊಳಿಸಿದರು. ಈ ಪ್ರಕರಣದಲ್ಲಿ ಹಲವರ ಬಂಧನವಾಗುತ್ತಿದ್ದಂತೆ ಅಶ್ವಿನ್ ತಲೆಮರೆಸಿಕೊಂಡಿದ್ದ. ಚಿಕ್ಕಮಗಳೂರಿನಲ್ಲಿ ಈತನನ್ನು ಬಂಧಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಿರುವ ಎ1, ಎ6 ಸೇರಿದಂತೆ ಇನ್ನೂ ಹಲವು ಆರೋಪಿಗಳು ಪೊಲೀಸರ ಕೈಗೆ ಸಿಗಬೇಕಿದೆ. ಪ್ರಕರಣದ ತನಿಖೆ ಮುಂದುವರೆದಿದೆ.












Click it and Unblock the Notifications