ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ
ಬೆಂಗಳೂರು, ಫೆಬ್ರವರಿ 03 : ಅಪಾರ್ಟ್ ಮೆಂಟ್ ನ ನೆಲಮಹಡಿಯಲ್ಲಿ ಕಾರು ನಿಲ್ಲಿಸಿ ಕೆಳಗಿಳಿಯಬೇಕು ಎನ್ನುವಷ್ಟರಲ್ಲಿ ಕಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡು ತಾಯಿ ಹಾಗೂ ನಾಲ್ಕು ವರ್ಷದ ಮಗ ಸಜೀವದಹನವಾಗಿರುವ ದಾರುಣ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ಅಲ್ಲಿನ ಬೋರ್ ವೆಲ್ ರಸ್ತೆಯಲ್ಲಿರುವ ಸುಮಧುರ ಆನಂದಂ ಅಪಾರ್ಟ್ ಮೆಂಟ್ ನಿವಾಸಿಗಳಾದ ನೇಹಾ ವರ್ಮಾ(30 ) ಹಾಗೂ ಪುತ್ರ ಪರಮ್(4 ) ಮೃತರು.
ನೇಹಾ ಅವರ ಪರಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ನೇಹಾ ವರ್ಮ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾರುತಿ ರಿಡ್ಜ್ ಕಾರು ತೆಗೆದುಕೊಂಡು ಹೊರಗೆ ಹೋಗಿದ್ದರು. 3.25 ರ ಸುಮಾರಿಗೆ ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದಾರೆ.

ಅಪಾರ್ಟ್ ಮೆಂಟ್ ಗೆ ಬಂದು ಕಾರು ನಿಲ್ಲಿಸಿ ನೆಲಮಹಡಿಗೆ ಹೋಗಿದ್ದಾರೆ. ಐದು ನಿಮಿಷಗಳಲ್ಲೇ ಜೋರಾದ ಸ್ಫೋಟದ ಸದ್ದು ನೆಲಮಹಡಿಯಲ್ಲಿ ಕೇಳಿದೆ. ಬಳಿಕ ಕಾರಿನ ಬಾನೆಟ್ ಭಾಗಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಸಮೀಪದ ಅಂಗಡಿಗಳಲ್ಲಿ ಸ್ಥಳೀಯರು ಹಾಗೂ ಅಪಾರ್ಟ್ ಮೆಂಟ್ ನಿವಾಸಿಗಳು ಹಾಗೂ ಸೆಕ್ಯುರಿಟಿ ಗಾರ್ಡ್ ಗಳು ನೆಲಮಹಡಿಗೆ ಬಂದಿದ್ದಾರೆ.
ಆದರೆ, ಅಷ್ಟೊತ್ತಿಗಾಗಲೇ ಕಾರು ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿತ್ತು. ನಿವಾಸಿಗಳು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿಯಾರಿಸುಷ್ಟೊತ್ತಿಗೆ, ಕಾರಿನಲ್ಲಿದ್ದ ನೇಹಾ ವರ್ಮಾ ಹಾಗೂ ಪರಮ್ ಸುಟ್ಟು ಕರಕಲಾಗಿದ್ದರು.
ಕಾರನ್ನು ತಿರುಗಿಸಿಕೊಳ್ಳುವ ವೇಳೆ ವಿದ್ಯುತ್ ಪ್ಯಾನಲ್ ಗೆ ಟಿಕ್ಕಿಹೊಡೆದು ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications