New STP: ಜಲಮಂಡಳಿಯಿಂದ 1MLD ಸಾಮರ್ಥ್ಯದ ಎಸ್‌ಟಿಪಿ ಯೋಜನೆ: ತಗ್ಗಲಿದೆ ಕಾವೇರಿ ಬಳಕೆ, ಬೇರೆ ಏನೆಲ್ಲ ಲಾಭ?

ಬೆಂಗಳೂರು: ಬೆಂಗಳೂರಲ್ಲಿ ನಿತ್ಯ ಟಿಎಂಸಿ ಗಟ್ಟಲೇ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತದೆ. ಅದನ್ನು ಸಂಸ್ಕರಿಸಿ ಕೆರೆಗಳಿಗೆ, ಇತರ ಉದ್ದೇಶಗಳಿಗೆ ಈಗಾಗಲೇ ಬಳಸಲಾಗುತ್ತದೆ. ಅಂತಹ ನೀರು ಸಂಸ್ಕರಣೆಗೆಂದೇ ತ್ಯಾಜ್ಯ ನೀರು ಸಂಸ್ಕರಣಾ (STP) ಗಳಿವೆ. ಇದೀಗ ಆ ಸಾಲಿಗೆ ಹೊಸದೊಂದು ಎಸ್‌ಟಿಪಿ ಸ್ಥಾಪನೆಗೆ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ಮುಂದಾಗಿದೆ.

ತಾವರೆಕರೆ ಸ್ಥಳೀಯ ನಿವಾಸಿಗಳು, ನಡಿಗೆದಾರರು ಹಾಗೂ ಉದ್ಯಾನವನ ಬಳಕೆದಾರರಿಂದ ಬಂದ ನಿರಂತರ ಮನವಿಗಳಿಗೆ ಸ್ಪಂದಿಸಿರುವ ಬೆಂಗಳೂರು ಜಲಮಂಡಳಿ, ತಾವರೆಕೆರೆ ಉದ್ಯಾನವನದ ಸಮೀಪ 1 ಎಂಎಲ್‌ಡಿ ಸಾಮರ್ಥ್ಯದ ವಿಕೇಂದ್ರೀಕೃತ ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಲು ಮುಂದಾಗಿದೆ.

BWSSB

ತಾವರೆಕೆರೆ ಉದ್ಯಾನವನದ ಸಮೀಪದ ಮಳೆನೀರು ಕಾಲುವೆಯಲ್ಲಿ ಗಣನೀಯ ಪ್ರಮಾಣದ ಒಳಚರಂಡಿ ನೀರು ಹರಿಯುತ್ತಿದೆ. ಇದರಿಂದ ದುರ್ವಾಸನೆ, ನೊಣಗಳ ಕಾಟ ಮತ್ತು ಅನೈರ್ಮಲ್ಯ ಉಂಟಾಗುತ್ತಿರುವ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಉದ್ಯಾನವನ ಬಳಕೆದಾರರಿಂದ ಮನವಿಗಳು ಬಂದಿವೆ. ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.

1 ಎಂಎಲ್‌ಡಿ ಒಳಚರಂಡಿ ನೀರು ಸಂಸ್ಕರಣೆ

ಪ್ರಸ್ತಾವಿತ ಯೋಜನೆಯಡಿ ಕಾಲುವೆಯಲ್ಲಿ ಹರಿಯುವ ಒಳಚರಂಡಿ ನೀರನ್ನು ತಡೆದು, 1 ಎಂಎಲ್‌ಡಿ ಎಸ್‌ಟಿಪಿಯಲ್ಲಿ ಕೆಎಸ್‌ಪಿಸಿಬಿ ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ಸಂಸ್ಕರಿಸಲಾಗುವುದು. ಇದರಿಂದ ಕಾಲುವೆಯಲ್ಲಿ ಹರಿಯುವ ತ್ಯಾಜ್ಯನೀರಿನ ಪ್ರಮಾಣ ಕಡಿಮೆಯಾಗಿ, ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೈರ್ಮಲ್ಯ ಹಾಗೂ ಪರಿಸರದ ಗುಣಮಟ್ಟ ಸುಧಾರಿಸಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಗ್ಗಲಿದೆ ಕಾವೇರಿ ನೀರಿನ ಬಳಕೆ!

ಉದ್ಯಾನವನದ ಗಿಡಗಳು ಮತ್ತು ಹಸಿರು ಪ್ರದೇಶಗಳ ನಿರ್ವಹಣೆಗೆ ಪ್ರಸ್ತುತ ಕುಡಿಯುವ ನೀರನ್ನು ಬಳಸಲಾಗುತ್ತಿದೆ. ಪ್ರಸ್ತಾವಿತ ಘಟಕದಿಂದ ಲಭ್ಯವಾಗುವ ಸಂಸ್ಕರಿಸಿದ ನೀರನ್ನು ತೋಟಗಾರಿಕೆ ಮತ್ತು ಹಸಿರು ಪ್ರದೇಶಗಳ ನಿರ್ವಹಣೆಗೆ ಬಳಸುವ ಮೂಲಕ ಕುಡಿಯುವ ನೀರನ್ನು ಉಳಿಸುವ ಉದ್ದೇಶ ಹೊಂದಲಾಗಿದೆ.

ಹೆಚ್ಚುವರಿ ಸಂಸ್ಕರಿಸಿದ ನೀರನ್ನು ನಿರ್ಮಾಣ ಕಾಮಗಾರಿಗಳು, ತೋಟಗಾರಿಕೆ, ರಸ್ತೆ ಮತ್ತು ಆವರಣಗಳ ಸ್ವಚ್ಛತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿವಿಧ ಕುಡಿಯೇತರ ಅಗತ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ.

ಹೊಸ ಎಸ್‌ಟಿಪಿಯ ಪ್ರಮುಖ ಪ್ರಯೋಜನಗಳು ಹೀಗಿವೆ

* ಸ್ಥಳೀಯ ನಿವಾಸಿಗಳು ಮತ್ತು ಉದ್ಯಾನವನ ಬಳಕೆದಾರರಿಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ
* ಕಾಲುವೆಯಲ್ಲಿ ಹರಿಯುವ ಒಳಚರಂಡಿ ನೀರಿನ ತಡೆ ಮತ್ತು ಸಂಸ್ಕರಣೆ
* ದುರ್ವಾಸನೆ, ನೊಣಗಳ ಕಾಟ ಮತ್ತು ಅನೈರ್ಮಲ್ಯದ ನಿಯಂತ್ರಣ
* ಉದ್ಯಾನವನ ಮತ್ತು ಸುತ್ತಮುತ್ತಲಿನ ಪರಿಸರದ ಪುನರುಜ್ಜೀವನ
* ತೋಟಗಾರಿಕೆಗೆ ಬಳಸಲಾಗುತ್ತಿರುವ ಕುಡಿಯುವ ನೀರಿನ ಉಳಿತಾಯ
* ಸಂಸ್ಕರಿಸಿದ ನೀರಿನ ಪರಿಣಾಮಕಾರಿ ಮರುಬಳಕೆ
* ಕಾಲುವೆಗಳು ಮತ್ತು ಜಲಮೂಲಗಳಿಗೆ ಸೇರುವ ತ್ಯಾಜ್ಯನೀರಿನ ಪ್ರಮಾಣ ಕಡಿತ

ಪರಿಸರ ಸಂರಕ್ಷಣೆಗೂ ಪೂರಕ ಯೋಜನೆ

ಹೊಸ ಎಸ್‌ ಟಿ ಪಿ ಯೋಜನೆ ಅನುಷ್ಠಾನಗೊಂಡಲ್ಲಿ, ತಾವರೆಕೆರೆ ಉದ್ಯಾನವನವನ್ನು ನಗರ ತ್ಯಾಜ್ಯನೀರು ಸಂಸ್ಕರಣೆ, ಜಲಸಂರಕ್ಷಣೆ, ಪರಿಸರ ಪುನರುಜ್ಜೀವನ ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಯ ಸ್ವಾವಲಂಬಿ ಪರಿಸರ ಮಾದರಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ.

ಯೋಜನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಸ್ತುತ ಪರಿಶೀಲನೆ ಮತ್ತು ಮೌಲ್ಯಮಾಪನ ಹಂತದಲ್ಲಿದೆ. ಜಾರಿಯಲ್ಲಿರುವ ನಿಯಮಗಳು ಮತ್ತು ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+