ಬೆಂಗಳೂರಿನಲ್ಲಿ ನೀರಿನ ದರ ಶೇ 10 ರಷ್ಟು ಹೆಚ್ಚಳ
ಬೆಂಗಳೂರು, ಅ.7 : ದಸರಾ ಹಬ್ಬ ಮುಗಿಯುತ್ತಿದ್ದಂತೆ ಬೆಂಗಳೂರಿನ ಜನರು ವಾಟರ್ ಬಿಲ್ ಹೆಚ್ಚಳದ ಬಿಸಿ ಎದುರಿಸಲಿದ್ದಾರೆ. ಬೆಂಗಳೂರು ಜಲಮಂಡಳಿ ಶೇ 10 ರಷ್ಟು ನೀರಿನ ದರ ಏರಿಕೆ ಮಾಡಲು ಸಿದ್ಧವಾಗಿದೆ.
ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೆಂಗಳೂರು ಜಲಮಂಡಳಿ ನೀರಿನ ದರ ಹೆಚ್ಚಳದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಸದ್ಯ ನಗರಾಭಿವೃದ್ಧಿ ಇಲಾಖೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆ ನಗರಾಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಜಲಮಂಡಳಿ ಒಂದು ಸುತ್ತಿನ ಮಾತುಕತೆ ನಡೆಸಿ, ನೀರಿನ ದರ ಹೆಚ್ಚಿಸಲು ಮುಂದಾಗಿವೆ. ಅ.20ರ ವೇಳೆಗೆ ದರ ಹೆಚ್ಚಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
2005ರಿಂದ ನಗರದಲ್ಲಿ ನೀರಿನ ದರ ಹೆಚ್ಚಳವಾಗಿಲ್ಲ. ಇದರಿಂದ ಶೇ 10ರಷ್ಟು ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ವಿದ್ಯುತ್ ಬಿಲ್, ವಿವಿಧ ಯೋಜನೆಗಳಿಗೆ ಅನುದಾನ ಹೊಂದಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರಕ್ಕೆ ನೀರು ಸರಬರಾಜು ಮಾಡಲು ಜಲಮಂಡಳಿ ವರ್ಷಕ್ಕೆ 400ಕೋಟಿ ವಿದ್ಯುತ್ ಬಿಲ್ ಪಾವತಿ ಮಾಡುತ್ತದೆ. ನೀರಿನ ಸಂಸ್ಕರಣೆ ಘಟಕಗಳನ್ನು ಸ್ಥಾಪನೆ ಮಾಡಲು 2,750 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. (ಬೆಂಗಳೂರು : ಹೆಚ್ಚಾಗಲಿದೆ ನೀರಿನ ದರ)
ಮಳೆ ನೀರು ಸಂಗ್ರಹಣೆಗೆ 500 ಕೋಟಿ ರೂ.ಗಳ ಅಗತ್ಯವಿದೆ. ಆದ್ದರಿಂದ ನೀರಿನ ದರ ಹೆಚ್ಚಳ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುವ ಗುರಿಯನ್ನು ಜಲಮಂಡಳಿ ಹೊಂದಿದೆ. ಇದರಿಂದಾಗಿ ನೀರಿನ ದರ ಹೆಚ್ಚಳದ ಬಿಸಿ ದಸರಾ ನಂತರ ಗ್ರಾಹಕರಿಗೆ ತಟ್ಟುವುದು ಖಚಿತವಾಗಿದೆ.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಮಂಡಳಿ ನೀರಿನ ಬಿಲ್ ಹೆಚ್ಚಿಸುವ ಕುರಿತು ಸರ್ಕಾಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರ ಅದನ್ನು ತಳ್ಳಿ ಹಾಕಿತ್ತು. ಸದ್ಯ ಹೊಸ ಸರ್ಕಾರ ಬಂದಿರುವುದರಿಂದ ಅದನ್ನು ಜಾರಿಗೆ ತರಲು ಮುಂದಾಗಿದೆ.











Click it and Unblock the Notifications