ಲಂಚ ಆರೋಪ: ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮಾಜಿ ಡಿಸಿ ಮಂಜುನಾಥ್
ಬೆಂಗಳೂರು,ಜು.19: ಭೂ ವ್ಯಾಜ್ಯವೊಂದರಲ್ಲಿ ತಮ್ಮ ಪರ ಆದೇಶ ನೀಡಲು 5 ಲಕ್ಷ ರೂ. ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅವರ ಜಾಮೀನು ಅರ್ಜಿ ಇನ್ನೂ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ. ಇನ್ನೆರಡು ಮೂರು ದಿನಗಳಲ್ಲಿ ನ್ಯಾ. ಸಂದೇಶ್ ಅವರಿದ್ದ ಏಕಸದಸ್ಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.
ಇದೇ ಪ್ರಕರಣದ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪತಹಸೀಲ್ದಾರ್ ಪಿ.ಎಸ್. ಮಹೇಶ್ ಜಾಮೀನು ಅರ್ಜಿ ಗುರುವಾರ ವಿಚಾರಣೆಗೆ ಬರಲಿದ್ದು, ಅದರ ಜೊತೆ ಜೆ.ಮಂಜುನಾಥ್ ಜಾಮೀನು ಅರ್ಜಿಯನ್ನೂ ಸಹ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.
ಹೈಕೋರ್ಟ್ ಚಾಟಿ ನಂತರ ಬಂಧನ: ಲಂಚ ಆರೋಪ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಮೇಲ್ನೋಟಕ್ಕೆ ಸ್ಪಷ್ಟ ಸಾಕ್ಷ್ಯವಿದ್ದರೂ ಕ್ರಮ ಕೈಗೊಳ್ಳದ ಭ್ರಷ್ಟಚಾರ ನಿಗ್ರಹ ದಳದ ಕಾರ್ಯವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.
''ನೀವು(ಎಸಿಬಿ) ಸಣ್ಣ ಪುಟ್ಟ ಜನರನ್ನು ಹಿಡಿಯುತ್ತೀರಿ, ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಾಗೆಯೇ ಬಿಡುತ್ತೀರಿ. ಇದು ಸರಿಯೇ, ಕಾನೂನು ಎಲ್ಲರಿಗೂ ಒಂದೇ, ಯಾವುದೇ ಅಧಿಕಾರಿಯ ಮುಲಾಜಿಗೆ ಒಳಗಾಗದೆ ಕಾರ್ಯನಿರ್ವಹಿಸಬೇಕು'' ಎಂದು ಎಸಿಬಿ ಮತ್ತು ಅದರ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹರಿಹಾಯ್ದಿತ್ತು.

ಹಾಗಾಗಿ ಕಳೆದ ಜು.4ರಂದು, ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರನ್ನು ಎಸಿಬಿ ಬಂಧಿತ್ತು. ಅಂದಿನಿಂದ ನ್ಯಾಯಾಂಗ ಬಂಧನದಲ್ಲಿರುವ ಜೆ. ಮಂಜುನಾಥ್ ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇತ್ತೀಚೆಗಷ್ಟೆ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹಾಗಾಗಿ ಆತ ಮೇಲ್ಮನವಿ ಸಲ್ಲಿಸಿದ್ದಾರೆ.
ತನಿಖೆ ಎದುರಿಸಲು ಆದೇಶ: ಕಂದಾಯ ವ್ಯಾಜ್ಯವೊಂದರಲ್ಲಿ ಪಕ್ಷಪಾತಿ ತೀರ್ಪು ನೀಡುವ ಉದ್ದೇಶದಿಂದ 5 ಲಕ್ಷ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ಹೈಕೋರ್ಟ್ ಜೂ,28ರಂದು ತನಿಖೆ ಎದುರಿಸಲು ಆದೇಶ ನೀಡಿತ್ತು ಮತ್ತು ಅವರಿಗೆ ಕಾನೂನು ಆಸರೆಯಾಗಬಲ್ಲ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಜೆ.ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿ, 'ತನಿಖೆ ನಡೆಯಲಿ ನೋಡೋಣ' ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದೇಶಿಸಿತ್ತು.
ಸಾಕ್ಷ್ಯಗಳೇ ಇಲ್ಲವೆಂದು ವಾದ: ಅರ್ಜಿದಾರರ ವಾದಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, 'ಅರ್ಜಿದಾರರ ವಿರುದ್ಧ ಎಸಿಬಿ ದಾಖಲಿಸಿರುವ ದೂರು ಏಕಪಕ್ಷೀಯ ಮತ್ತು ಅವರಿಗೆ ಕಿರಿಕಿರಿಯುಂಟು ಮಾಡುವ ದೂರಾಲೋಚನೆಯಿಂದ ಕೂಡಿದೆ. ದೂರನ್ನು ಪಡೆದು ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಮಂಜುನಾಥ್ ಅವರ ಪೂರ್ವ ಹೇಳಿಕೆ ಪಡೆದಿಲ್ಲ' ಎಂದು ಆಕ್ಷೇಪಿಸಿದರು.
ಅಲ್ಲದೆ, ''ಅಪರಾಧ ನಡೆದಿದೆ ಎಂದು ಹೇಳಲಾಗಿರುವುದು 2022ರ ಮೇ 18ರಂದು. ಆದರೆ, ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವುದು 2022ರ ಮೇ 21ರಂದು. ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 7 (ಎ) ಅನುಸಾರ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಅಥವಾ ನೌಕರ ಲಂಚಕ್ಕೆ ನಿರ್ದಿಷ್ಟ ಬೇಡಿಕೆ ಇಟ್ಟ ಬಗ್ಗೆ ಮತ್ತು ಅದನ್ನು ಪಡೆದ ಬಗ್ಗೆ ಮೇಲ್ನೋಟಕ್ಕೇ ಸಾಕಷ್ಟು ಸಾಕ್ಷ್ಯಾಧಾರಗಳಿರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಬಲವಾದ ಸಾಕ್ಷ್ಯಗಳು ಇಲ್ಲ'' ಎಂದಿದ್ದರು,
''ಭಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 17ಎ ಪ್ರಕಾರ ತನಿಖಾಧಿಕಾರಿಯು ಸಾರ್ವಜನಿಕ ಸೇವಕರ ವಿರುದ್ಧದ ತನಿಖೆಗೆ ಪೂರ್ವಾನುಮತಿ ಕೋರಿರಬೇಕು. ಆದರೆ, ಈ ಪ್ರಕರಣದಲ್ಲಿ ಎಸಿಬಿ ಪೂರ್ವಾನುಮತಿಯನ್ನೇ ಪಡೆದಿಲ್ಲ. ಕಂದಾಯ ವ್ಯಾಜ್ಯವನ್ನು ಇತ್ಯರ್ಥಪಡಿಸಬೇಕಾಗಿದ್ದ ಅಧಿಕಾರಿ ಮಂಜುನಾಥ್ ಅವರೇ ಆಗಿದ್ದ ಕಾರಣ ಅವರೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಕುರುಡಾಗಿ ಶಂಕಿಸುವುದು ತರವಲ್ಲ. ಅವರ ತೇಜೋವಧೆ ಮಾಡಲು ಮತ್ತು ಅವರ ಕಳಂಕರಹಿತ ಸೇವೆಗೆ ಮುಕ್ಕು ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ. ಆದ್ದರಿಂದ, ಪ್ರಕರಣವನ್ನು ರದ್ದುಗೊಳಿಸಬೇಕು'' ಎಂದು ಕೋರಿದರು.












Click it and Unblock the Notifications