ಬಿಪಿಒ ಉದ್ಯೋಗಿ ರೇಪ್ ಕೇಸ್ : ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು
ಬೆಂಗಳೂರು, ಅಕ್ಟೋಬರ್ 06 : 'ಕಾಲ್ ಸೆಂಟರ್ ಉದ್ಯೋಗಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಹೇಳಿದರು.
ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಮೇಘರಿಕ್ ಅವರು ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದರು. 'ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೇಶ್ (27) ಮತ್ತು ಸುನೀಲ್ (23) ಎಂಬುವವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ' ಎಂದರು. [ಅಕ್ಟೋಬರ್ 3ರ ರಾತ್ರಿ ನಡೆದದ್ದೇನು?]

'ಅತ್ಯಾಚಾರಕ್ಕೆ ಒಳಗಾದ ಯುವತಿ ಟೆಂಪೋ ಟ್ರಾವೆಲರ್‌ನ ನಂಬರ್ ಅನ್ನು ಖಚಿತವಾಗಿ ನೀಡಿರಲಿಲ್ಲ. ಅವರು ನೀಡಿದ ಕೆಲವು ನಂಬರ್‌ಗಳ ಆಧಾರದ ಮೇಲೆ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಪೊಲೀಸರು ಟಿಟಿಯನ್ನು ಪತ್ತೆ ಹಚ್ಚಿದ್ದಾರೆ' ಎಂದು ವಿವರಣೆ ನೀಡಿದರು. [ಅತ್ಯಾಚಾರಕ್ಕೆ ಬಳಸಿದ್ದ ಟಿಟಿ ವಶ]
'ಬಂಧಿತ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಮೂರು ವರ್ಷಗಳಿಂದ ಟಿಟಿ ಓಡಿಸುತ್ತಿದ್ದರು. ಈ ಇಬ್ಬರೂ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳ ಫೋಟೋಗಳನ್ನು ನೀಡುವುದಿಲ್ಲ' ಎಂದು ಮೇಘರಿಕ್ ತಿಳಿಸಿದರು.
'ಸಂತ್ರಸ್ತ ಯುವತಿ ಮಡಿವಾಳ ಜಂಕ್ಷನ್‌ನಲ್ಲಿ ಟಿಟಿಯನ್ನು ಹತ್ತಿದ್ದಳು. ಟಿಟಿಯಲ್ಲಿ ಇಬ್ಬರು ಮಾತ್ರವಿದ್ದಾರೆ ಅದರಲ್ಲಿ ಹೋಗುವುದು ಬೇಡ ಎಂದು ಯುವತಿಯ ಸ್ನೇಹಿತೆ ಹೇಳಿದಳು. ಆದರೆ, ಅದನ್ನು ಪರಿಗಣಿಸಿದೇ ಆಕೆ ಟಿಟಿ ಹತ್ತಿದ್ದಳು' ಎಂದು ಆಯುಕ್ತರು ಹೇಳಿದರು.












Click it and Unblock the Notifications