ಬಿಗಿ ಭದ್ರತೆಯ ಕರ್ನಾಟಕದ ರಾಜಭವನಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು, ಡಿಸೆಂಬರ್ 12: ಬೆಂಗಳೂರಿನ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ದುಷ್ಕರ್ಮಿಯೊಬ್ಬ ನಿನ್ನೆ ತಡ ರಾತ್ರಿ ಸುಮಾರು 11.30ಕ್ಕೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ. ಬೆಂಗಳೂರಿನ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಕರೆ ಬಂದ ಕೂಡಲೇ ಅಲರ್ಟ್ ಆದ ನಗರದ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ಕರೆ ತಂದು ರಾಜಭವನವನ್ನು ಪರಿಶೀಲನೆ ನಡೆಸಿದ್ದಾರೆ.

ಬಾಂಬ್ ಬೆದರಿಕೆ ಕರೆ ಸಂಬಂಧ ಬೆಂಗಳೂರಿನ ವಿಧಾನಸಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಕರೆ ಮಾಡಿದ ವ್ಯಕ್ತಿಯ ಫೋನ್ ನಂಬರ್ ಟ್ರ್ಯಾಕ್ ಮಾಡುತ್ತಿದ್ದು, ಕರೆ ಮಾಡಿದ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಇನ್ನು ಈ ಹಿಂದೆ ಬೆಂಗಳೂರಿನ ಸುಮಾರು 48 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಬೆಂಗಳೂರು ನಗರದ ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ತಿಳಿದು ಬಂದಿತ್ತು.
ಬಸವೇಶ್ವರ ನಗರ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ 15 ಖಾಸಗಿ ಶಾಲೆಗಳಿಗೆ, ಆನೇಕಲ್ ವ್ಯಾಪ್ತಿಯ 5 ಶಾಲೆಗಳಿಗೆ ಅಲ್ಲದೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿವಾಸದ ಮುಂದಿನ ಶಾಲೆ ಸೇರಿದಂತೆ ಒಟ್ಟು 48 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಕರ್ನಾಟಕದ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.












Click it and Unblock the Notifications