BMTC: ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್, ಈ ಮೆಟ್ರೋ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು, ನವೆಂಬರ್ 05: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಲವು ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಸದ್ಯ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾರ್ಗವೊಂದರಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣ ತಲುಪಲು ಈ ಬಸ್ ಸಹಾಯಕವಾಗಿದೆ. ನಾನ್ ಎಸಿ ಬಸ್‌ಗಳನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.
ನವೆಂಬರ್ 4ರ ಸೋಮವಾರದಿಂದ ಬಿಎಂಟಿಸಿ ಎಂಎಫ್-38 ಎಂಬ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಸದ್ಯ ಒಂದು ನಾನ್ ಎಸಿ ಬಸ್ ಅನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ನಮ್ಮ ಮೆಟ್ರೋ ಪ್ರಯಾಣಿಕರು, ಇತರ ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಸ್ ಮಾರ್ಗದ ವಿವರ: ಬಿಎಂಟಿಸಿಯ ಎಂಎಫ್-38 ಬಸ್ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಿಂದ-ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ರಾಜರಾಜೇಶ್ವರಿ ನಗರದ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಈ ಮಾರ್ಗವನ್ನು ಪರಿಚಯಿಸಿದ್ದು, ನೂತನ ಮಾರ್ಗದ ಬಸ್ ಸಂಚಾರ ನಡೆಸುವ ಪ್ರದೇಶದ ವಿವರಗನ್ನು ನೀಡಿದೆ.
MF-38 ನಂಬರ್‌ನ ಬಸ್ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಿಂದ ಹೊರಟು ನಾಯಂಡಹಳ್ಳಿ, ವೀರಭದ್ರ ನಗರ, ಡಿಸೋಜಾ ನಗರ ಹಾಗೂ ವಿ. ಲೆಜೆಸಿ ಕನ್‌ವೆಕ್ಷನ್ ಹಾಲ್ ರೋಡ್, ಜವರೇಗೌಡ ನಗರ ಮಾರ್ಗವಾಗಿ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸದ್ಯ ಈ ಮಾರ್ಗದಲ್ಲಿ ಒಂದು ಬಸ್ ಮಾತ್ರ ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.
ಈ ಮಾರ್ಗದಲ್ಲಿ ಬಸ್ 7.40, 8.10, 9.10, 9.40, 10.30, 16.15, 17.00, 17.30, 18.00, 18.30, 19.00, 19.30, 20.00 ಗಂಟೆಗೆ ಸಂಚಾರವನ್ನು ನಡೆಸಲಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ನಮ್ಮ ಮೆಟ್ರೋ ಸಹ ಟ್ವೀಟ್ ಮಾಡಿದ್ದು. ಬಿಎಂಟಿಸಿ ಪ್ರಯಾಣಿಕರ ಸಂಪರ್ಕವನ್ನು ಹೆಚ್ಚಿಸಲು ಹೊಸ ನಾನ್-ಎಸಿ ಮೆಟ್ರೋ ಫೀಡರ್ ಮಾರ್ಗವನ್ನು ಪ್ರಾರಂಭಿಸಿದೆ. ಮೆಟ್ರೋ ನಿಲ್ದಾಣಗಳಿಗೆ ಪರಿಣಾಮಕಾರಿ ಮತ್ತು ಕೈಗೆಟುಕುವ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದೆ. ಪ್ರಯಾಣಿಕರ ಬಸ್ ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ.
ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ಬಿಎಂಆರ್‌ಸಿಎಲ್‌ನ ನೇರಳೆ ಮಾರ್ಗದ ವ್ಯಾಪ್ತಿಗೆ ಬರುತ್ತದೆ. ಇಲ್ಲಿಂದ ನಾಯಂಡಹಳ್ಳಿ, ವಿಜಯನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಾಗಬಹುದು. ಪ್ರತಿನಿತ್ಯ ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಾರೆ. ಹೊಸ ಬಸ್‌ನಿಂದ ಇವರಿಗೆ ಅನುಕೂಲವಾಗಲಿದೆ.
ಈ ವರ್ಷ ಬಿಎಂಟಿಸಿ 40ಕ್ಕೂ ಅಧಿಕ ಹೊಸ ಮಾರ್ಗವನ್ನು ಪರಿಚಯಿಸಿದೆ. ಇದರಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಮೆಟ್ರೋ ಫೀಡರ್ ಬಸ್ ಸೇವೆಗಳು ಸಹ ಸೇರಿವೆ. ಹೊಸ ಮಾರ್ಗದ ಬಸ್‌ಗಳು ಶೇ 70ರಷ್ಟು ಭರ್ತಿಯಾಗಿ ಸಂಚಾರವನ್ನು ನಡೆಸುತ್ತಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications