BMTC AC Bus: ಹೊಸ ವರ್ಷಕ್ಕೆ ರಸ್ತೆಗೆ ಇಳಿಯಲಿವೆ 320 ಬಿಎಂಟಿಸಿ ಬಸ್, ಪ್ರಯಾಣಿಕರು ಗಮನಿಸಿ
ಬೆಂಗಳೂರು, ಡಿಸೆಂಬರ್ 08: ಬೆಂಗಳೂರಿನಲ್ಲಿ ಸಾರಿಗೆ ಸೇವೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗಗಳಿಗೆ ಬಸ್ ನೀಡುತ್ತದೆ. ಅದೇ ರೀತಿ ನೂರಾರು ಎಸಿ ಬಸ್‌ಗಳನ್ನು ಇದೇ ಹೊಸ ವರ್ಷ 2025ರ ಜನವರಿಯಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲು ನಿಗಮ ಮುಂದಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಜನವರಿ 2025 ರಿಂದ ಹಂತ ಹಂತವಾಗಿ ಒಟ್ಟು 320 ಎಸಿ ಬಸ್ ಸಂಚರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ವೋಲ್ವೋ ಬಸ್ ಸೇರಿದಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಮೊದಲ ಬಾರಿಗೆ ಆರಂಭವಾಗುತ್ತಿವೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಹೊಸ ಮಾರ್ಗಗಳ ಪೈಕಿ ಮೆಜೆಸ್ಟಿಕ್ ನಿಲ್ದಾಣದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಆರಂಭದಲ್ಲಿ ಸಂಚರಿಸಲಿವೆ. ಬಳಿಕ ವಿವಿಧ ಮಾರ್ಗಗದಲ್ಲಿ ಪ್ರತಿನಿತ್ಯ 250 ಕಿಲೋ ಮೀಟರ್ ವರೆಗೆ ಸಂಚರಿಸಲಿದೆ. ಏರ್‌ಪೋರ್ಟ್‌ಗೆ ಓಡಾಡುತ್ತಿರುವ ವೊಲ್ವೋ ಬಸ್‌ಗಳು ಇತರ ಮಾರ್ಗಗಳಿಗೂ ವಿಸ್ತರಣೆಗೊಳ್ಳಿವೆ.
ಈ 320 ಎಸಿ ಬಸ್‌ಗಳಲ್ಲಿ ಪ್ರತಿಯೊಂದು 13 ಮೀಟರ್ ಉದ್ದ ಇರಲಿವೆ. ವಿಶೇಷ ಚೇತನರು ಬಸ್ ಹತ್ತಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಿರುವ ಬಸ್ ಇವಾಗಿವೆ. ಪ್ರತಿ ದಿನಕ್ಕೆ 250 ಕಿ.ಮೀ ಯಂತರ ವಾಷಿರ್ಕವಾಗಿ 87,500 ಕ್ಕೂ ಅಧಿಕ ಕಿಲೋಮೀಟರ್ ದೂರ ಕ್ರಮಿಸಲಿವೆ.
ಉದ್ದೇಶಿತ ಈ ಎಲ್ಲ ಬಸ್‌ಗಳು ಬಿಎಂಟಿಸಿ ನಾಲ್ಕು ಡಿಪೋಗಳಿಂದ ಕಾರ್ಯಾಚರಣೆ ನಡೆಸಲಿವೆ ಸುಭಾಷ್ ನಗರ (ಡಿಪೋ 7), ಕತ್ರಿಗುಪ್ಪೆ (ಡಿಪೋ 13), ಎಚ್‌ಎಸ್‌ಆರ್ ಬಡಾವಣೆ (ಡಿಪೋ 25) ಹಾಗೂ ವೈಟ್‌ಫೀಲ್ಡ್ (ಡಿಪೋ 18) ನಿಂದ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಬಿಎಂಟಿಸಿ ನಿರ್ಧರಿಸಿದೆ.
ಬಿಎಂಟಿಸ್ ಸಾಮಾನ್ಯ, ಎಸಿ ಬಸ್ ವಿವರ
474 ದೈನಂದಿನ ವಜ್ರ ಮತ್ತು ವಾಯು ವಜ್ರ ಮಾರ್ಗಗಳ ಬಸ್ ಸೇರಿದಂತೆ ಬಿಎಂಟಿಸಿ ಸದ್ಯ ನಗರದಲ್ಲಿ 593 ವೋಲ್ವೋ ಹವಾನಿಯಂತ್ರಿತ ಬಸ್ ಓಡಿಸುತ್ತಿದೆ. 300 ಅಶೋಕ್ ಲೇಲ್ಯಾಂಡ್ ಸ್ವಿಚ್ ಮೊಬಿಲಿಟಿ ಇ-ಬಸ್‌ಗಳು ನಿತ್ಯ ನೂರಾರು ಕಿಲೋ ಮೀಟರ್ ಸಂಚರಿಸುತ್ತವೆ. ಟಾಟಾ ಮೋಟಾರ್ಸ್‌ನಿಂದ 113 ಇ-ಬಸ್ ಗಳು ಹಾಗೂ 90 ಜಿಬಿಎಂ ಎನ್‌ಟಿಪಿಸಿ ಬಸ್‌ಗಳಿಂದ ಬಿಎಂಟಿಸಿ ಸಾರಿಗೆ ಕಲ್ಪಿಸಿದೆ.
ಬಿಎಂಟಿಸಿಯಿಂದ ನಗರಾದ್ಯಂತ ಸಂಚರಿಸುವ ಒಟ್ಟು 6,147 ಬಸ್‌ಗಳಲ್ಲಿ 5,644 ಡೀಸೆಲ್ ಹಾಗೂ 503 ವಿದ್ಯುತ್ ಚಾಲಿತ ಬಸ್‌ಗಳಾಗಿವೆ. ಎಸಿ ಅಲ್ಲದ 90 ಮಿಡಿ ಬಸ್ (9-ಮೀಟರ್, 12-ಮೀಟರ್ ಉದ್ದದ 300 ಬಸ್‌ಗಳು ಹಾಗೂ ಲೋ ಫ್ಲೋರ್ ವಿನ್ಯಾಸದ 12-ಮೀಟರ್ ಉದ್ದದ 110ಕ್ಕೂ ಹೆಚ್ಚು ಬಸ್‌ಗಳು ಸೇವೆ ನಿರತವಾಗಿವೆ.












Click it and Unblock the Notifications