BMTC: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರ ದಿಢೀರ್ ಮುಷ್ಕರ
ಬೆಂಗಳೂರು, ಮೇ 15: ಬೆಂಗಳೂರು ನಗರದಲ್ಲಿ ಬೆಳಗಿನ ಪೀಕ್ ಅವರ್‌ನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿತು. ಬಸ್ ಚಾಲಕರು ದಿಢೀರ್ ಮುಷ್ಕರ ನಡೆಸಿದ್ದರಿಂದ ಕೆಲವು ಗಂಟೆಗಳ ಕಾಲ ಬಸ್‌ಗಳ ಸಂಚಾರವಿಲ್ಲದೇ ಜನರು ಪರದಾಡಿದರು.
ಬಿಎಂಟಿಸಿಯ 113 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ಮಂಗಳವಾರ ದಿಢೀರ್ ಮುಷ್ಕರ ನಡೆಸಿದರು. ಶಾಂತಿ ನಗರ ಡಿಪೋಗೆ ಸೇರಿದ ಬಸ್‌ಗಳ ಚಾಲಕರು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಬೆಳಗ್ಗೆ 7 ರಿಂದ 2 ಗಂಟೆ ಮತ್ತು 7 ರಿಂದ 5 ಗಂಟೆಗಳ ನಡುವಿನ ಬಸ್ ಶೆಡ್ಯುಲ್‌ನಲ್ಲಿ ವ್ಯತ್ಯಯ ಉಂಟಾಗಿತ್ತು.

ಚಾಲಕರು ಬೆಳಗ್ಗೆ 7 ರಿಂದ 11 ಗಂಟೆಯ ತನಕ ಮುಷ್ಕರ ನಡೆಸಿದರು. ಬಳಿಕ ಕಂಪನಿ ಪ್ರತಿನಿಧಿಗಳು ಆಗಮಿಸಿ ಮಾತುಕತೆ ನಡೆಸಿದ ಬಳಿಕ, 11 ಗಂಟೆಯ ಬಳಿಕ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು ಎಂದು ಬಿಎಂಟಿಸಿ ಹೇಳಿದೆ.
ಶಾಂತಿ ನಗರ ಹೊರತುಪಡಿಸಿ ನಗರದ ಬೇರೆ ಯಾವುದೇ ಡಿಪೋಗಳ ಎಲೆಕ್ಟ್ರಿಕ್ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪ್ರಯಾಣಿಕರಿಗೆ ಆದ ತೊಂದರೆಗೆ ಬಿಎಂಟಿಸಿ ವಿಷಾದ ವ್ಯಕ್ತಪಡಿಸಿದೆ. ಚಾಲಕರ ವಿರುದ್ಧ ಕಂಪನಿ ಶಿಸ್ತು ಕ್ರಮ ಕೈಗೊಳ್ಳಲಿದೆ.
ಚಾಲಕರ ದಿಢೀರ್ ಮುಷ್ಕರ ಏಕೆ?; ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಚಾಲಕರು ವೇತನ ಹೆಚ್ಚಳ, ಓವರ್ ಟೈಂಗೆ ಪೇಮೆಂಟ್ ಹೆಚ್ಚಳ, ಎಲ್ಲಾ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ದಿಢೀರ್ ಮುಷ್ಕರ ನಡೆಸಿದರು.
ಎಲೆಕ್ಟ್ರಿಕ್ ಬಸ್ ಓಡಿಸುವ ಚಾಲಕರಿಗೆ 20,000 ರೂ. ವೇತನವಿದ್ದು, 18,000 ರೂ. ಕೈಗೆ ಸಿಗುತ್ತದೆ. ಈ ವೇತನ ಕಡಿಮೆ ಇದ್ದು, ಹೆಚ್ಚಳ ಮಾಡಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ. ಓವರ್ ಟೈಂ ಪೇಮೆಂಟ್ ಹೆಚ್ಚಿಸಬೇಕು. ಈಗ ಬಿಎಂಟಿಸಿಗೆ ಮಾತ್ರ ಲಭ್ಯವಿರುವ ಉಚಿತ ಪ್ರಯಾಣವನ್ನು ಎಲ್ಲಾ ಬಸ್‌ಗಳಿಗೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಟಾಟಾ ಸಂಸ್ಥೆ ಮೂಲಕ ಬಿಎಂಟಿಸಿಗೆ 246 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ 675 ಬಸ್‌ಗಳು ಸಂಚಾರವನ್ನು ಆರಂಭಿಸಲಿವೆ. ಬಿಎಂಟಿಸಿ ಪ್ರತಿ ಕಿ. ಮೀ.ಗೆ 41 ರೂ. ಪಾವತಿ ಮಾಡುತ್ತದೆ ಮತ್ತು ಬಸ್ ಪ್ರತಿ ದಿನ 200 ಕಿ. ಮೀ. ಕನಿಷ್ಠ ಸಂಚಾರ ನಡೆಸಬೇಕಿದೆ.
ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಿರುವ ಟಾಟಾ ಸಂಸ್ಥೆ ಡ್ರೈವರ್‌ಗಳನ್ನು ಒದಗಿಸಿದೆ. ಅಲ್ಲದೇ ಬಸ್‌ಗಳ ನಿರ್ವಹಣೆ ನೋಡಿಕೊಳ್ಳುತ್ತದೆ. ಬಿಎಂಟಿಸಿ ಈ ಬಸ್‌ಗಳ ಗುತ್ತಿಗೆ ಮೂಲಕ ಪ್ರತಿ ಕಿ. ಮೀ.ಗೆ 18 ರೂ. ಉಳಿತಾಯ ಮಾಡುತ್ತದೆ.
ಪ್ರತಿ ಎಲೆಕ್ಟ್ರಿಕ್ ಬಸ್ ಪ್ರತಿ ಕಿ. ಮೀ.ಗೆ 60 ರೂ. ವೆಚ್ಚ ( 41 ರೂ. ಗುತ್ತಿಗೆ, 14 ರೂ. ಕಂಡಕ್ಟರ್, 5 ರೂ. ನಿರ್ವಹಣೆ). ಅದೇ ಡಿಸೆಲ್ ಬಸ್ ಪ್ರತಿ ಕಿ. ಮೀ.ಗೆ 78 ರೂ. ಮತ್ತು ವೊಲ್ವೋ ಬಸ್‌ಗಳು ಪ್ರತಿ ಕಿ. ಮೀ.ಗೆ 105 ರೂ. ವೆಚ್ಚವಾಗುತ್ತದೆ.
ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡಿರುವ ಟಾಟಾ ಕಂಪನಿಯೇ ಚಾಲಕರನ್ನು ನೇಮಕಾತಿ ಮಾಡಿಕೊಂಡು ಅವರಿಗೆ ವೇತನ ಪಾವತಿ ಮಾಡುತ್ತದೆ. ಆದ್ದರಿಂದ ಈ ಬಸ್ ಚಾಲಕರ ದಿಢೀರ್ ಮುಷ್ಕರಕ್ಕೂ ಬಿಎಂಟಿಸಿಗೂ ಸಂಬಂಧವಿಲ್ಲ. ಆದರೆ ಚಾಲಕರು ಕೆಲಸಕ್ಕೆ ಹಾಜರಾಗಲು ನಿರಾಕರಿಸಿದ ಕಾರಣ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಬಿಎಂಟಿಸಿಯ ಬಳಿ 636 ಎಲೆಕ್ಟ್ರಿಕ್ ಬಸ್‌ಗಳಿವೆ. ಸ್ವಿಚ್ ಮೊಬಿಲಿಟಿ 300 ಬಸ್‌ಗಳು ಮತ್ತು 90 ಬಸ್‌ಗಳನ್ನು ಜೆಬಿಎಂ ಆಟೋ ಲಿಮಿಟೆಡ್ ಪೂರೈಕೆ ಮಾಡಿದೆ.












Click it and Unblock the Notifications