ಯುವತಿ ಮೇಲೆ ಬಸ್ ಹತ್ತಿಸಲು ಮುಂದಾದ ಬಿಎಂಟಿಸಿ ಡ್ರೈವರ್, ವಿಡಿಯೋ ವೈರಲ್
ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಹಾಡಹಗಲೇ ಬಿಎಂಟಿಸಿ ಚಾಲಕನೊಬ್ಬ ಯುವತಿ ಮೇಲೆ ಬಸ್ ಹತ್ತಿಸಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್ ಜಾಮ್ ನಡುವೆಯೂ ಚಾಲಕನ ಈ ವರ್ತನೆ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಯುವತಿಯೊಬ್ಬರು ಬಸ್ ಮುಂದೆ ನಿಂತಿದ್ದರೂ ಅದನ್ನು ಲೆಕ್ಕಿಸದೆ ಬೇಕಂತಲೇ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಅದೃಷ್ಟವಶಾತ್ ಆ ಯುವತಿ ಬಸ್‌ನಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾಳೆ. ಅಸಲಿಗೆ ಈ ಘಟನೆ ನಡೆದಿದ್ದಾರೂ ಏಕೆ ಎನ್ನುವ ವಿವರ ಇಲ್ಲಿದೆ..
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಸಮಯದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ ಚಾಲಕನೊಬ್ಬ ಜನನಿಬಿಡ ರಸ್ತೆಯಲ್ಲಿ ಯುವತಿ ಮೇಲೆ ಬಸ್ ಹತ್ತಿಸಲು ಮುಂದಾಗಿರುವುದು ವಿಡಿಯೋದಲ್ಲಿದೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿದ ಹಲವರು ಬಸ್ ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ವರದಿಗಳ ಪ್ರಕಾರ, ಆ ಯುವತಿಯು ಬಿಎಂಟಿಸಿ ಬಸ್ ಪಕ್ಕದಲ್ಲಿ ನಿಂತಿದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಯಲ್ಲಿ ಕಾರಿನಿಂದ ಇಳಿದ ಆ ಯುವತಿ ಬಸ್ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದು, ಚಾಲಕನನ್ನು ಪ್ರಶ್ನಿಸಲು ಆಕೆ ತನ್ನ ವಾಹನದಿಂದ ಇಳಿದರು ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಯುವತಿ ಬಸ್ ಎದುರು ನಿಂತಿದ್ದಾರೆ. ನೋಡನೋಡುತ್ತಿದ್ದಂತೆ ಚಾಲಕ ಬಸ್ ಅನ್ನು ಚಾಲನೆ ಮಾಡಿದ್ದಾನೆ. ಅಲ್ಲದೆ ಆ ಯುವತಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯಲು ಚಾಲಕ ಈ ರೀತಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅದೃಷ್ಟವಶಾತ್, ಆ ಯುವತಿ ಹಿಂದಕ್ಕೆ ಹೆಜ್ಜೆ ಹಾಕಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯನ್ನು ಪಕ್ಕದಲ್ಲಿದ್ದವರು ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆದ ಬೆನ್ನಲ್ಲೇ ಬಿಎಂಟಿಸಿ ಸಿಬ್ಬಂದಿಯ ವರ್ತನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಿಎಂಟಿಸಿ ಡ್ರೈವರ್ ಸಸ್ಪೆಂಡ್
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಎಂಟಿಸಿ ಎಚ್ಚೆತ್ತುಕೊಂಡು ಆ ಚಾಲಕನನ್ನು ಸಸ್ಪೆಂಡ್ ಮಾಡಿದೆ. ಈ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಇದರ ಸಂಪೂರ್ಣ ದೃಶ್ಯಗಳು ಕಾರಿನ ಡ್ಯಾಶ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಬಿಎಂಟಿಸಿ ಬಸ್‌ಗೆ ಅಡ್ಡವಾಗಿ ನಿಲ್ಲುವುದಕ್ಕೂ ಮುನ್ನ ಅಸಲಿಗೆ ನಡೆದಿದ್ದೇನು? ಎಂಬ ಬಗ್ಗೆ ತನಿಖೆಯೂ ಮುಂದುವರಿದಿದೆ.
ಕಾರಿನ ಚಾಲಕರು ಈ ಬಸ್ ನಿಲ್ಲಿಸಲು ಹೇಳಿದ್ದರು. ಆದರೆ ಚಾಲಕ ಬಸ್ ನಿಲ್ಲಿಸದೇ ಚಾಲನೆ ಮಾಡಿದ್ದರು ಎನ್ನಲಾಗಿದೆ. ಅತಿವೇಗ ಹಾಗೂ ಅಜಾಗರೂಕತೆ ವರ್ತನೆ ಆರೋಪದ ಮೇರೆಗೆ ಚಾಲಕನನ್ನು ಸಸ್ಪೆಂಡ್ ಮಾಡಿರುವುದಾಗಿ ತಿಳಿದುಬಂದಿದೆ. ಈ ಘಟನೆಗೂ ಮುನ್ನ ಯುವತಿ ಹಾಗೂ ಬಸ್ ಡ್ರೈವರ್ ನಡುವೆ ಕಿರಿಕ್ ಆಗಿತ್ತು ಎನ್ನಲಾಗಿದೆ.
ಟ್ಯಾಂಕರ್ ಜೊತೆಗೆ ಆ ಯುವತಿ ಗಲಾಟೆ ಮಾಡಿಕೊಂಡಿದ್ದರಿಂದ ಬಸ್ ಟ್ರಾಫಿಕ್‌ನಲ್ಲಿ ಸಿಲುಕಿತು. ಅದಕ್ಕೆ ನಾನು ಆಕೆಯನ್ನು ಬೈದೆ. ಆಗ ಯುವತಿ ಕಾರನ್ನು ಬಸ್ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿದರು. ಬಳಿಕ ಹಿಂದೆಯೇ ಬಂದು ಬಸ್‌ನಿಂದ ಕೆಳಗೆ ಇಳಿಯುವಂತೆ ಗಲಾಟೆ ಮಾಡಿದ್ರು, ಅವಾಚ್ಯ ಶಬ್ಧಗಳನ್ನು ಬಳಸಿದ್ರು. ನಾನು ಸುಮ್ಮನೆ ಅಲ್ಲಿಂದ ಹೊರಡಲು ಯತ್ನಿಸಿದೆ. ಆದರೆ ಯುವತಿ ಮೇಲೆ ಬಸ್ ಹತ್ತಿಸಲು ನಾನು ಮುಂದಾಗಿಲ್ಲ ಎಂದು ಚಾಲಕ ವಿವರಿಸಿದ್ದಾರೆ.












Click it and Unblock the Notifications