ಬಿಎಂಟಿಸಿ ಪ್ರಯಾಣಕ್ಕೆ ಪ್ರತ್ಯೇಕ ಸ್ಮಾರ್ಟ್‌ಕಾರ್ಡ್
ಬೆಂಗಳೂರು, ಮೇ 18: ಬಿಎಂಟಿಸಿ ಬಸ್ ಪ್ರಯಾಣಕ್ಕೆ ಮೆಟ್ರೋ ಮಾದರಿಯ ಪ್ರತ್ಯೇಕ ಸ್ಮಾರ್ಟ್ ಕಾರ್ಡ್‌ಗಳು ಸಿದ್ಧಗೊಳ್ಳುತ್ತಿದೆ. ಇದು ಕೇವಲ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈಗಾಗಲೇ ಹಲವು ಆಸಕ್ತ ಸಂರ್ಸಥೆಗಳ ಜತೆ ನಿಗಮದ ಹಿರಿಯ ಅಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.
ಚಿಲ್ಲರೆ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ನಗದುರಹಿತ ಪ್ರಯಾಣಕ್ಕೆ ಒತ್ತು ನೀಡಲು ಓಪನ್ ಲೂಪ್ ಸ್ಮಾರ್ಟ್ ಕಾರ್ಡ್ ತಯಾರಿಗೆ ನಿಗಮ ನಿರ್ಧರಿಸಿತ್ತು. ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ ಪ್ರಯಾಣ ಜತೆಗೆ ಶಾಪಿಂಗ್‌ಗೂ ಸ್ಮಾರ್ಟ್ ಕಾರ್ಡ್ ಗಳನ್ನು ನಿಗಮ ಪ್ರಾಯೋಗಿಕವಾಗಿ ಪ್ರಾರಂಭಿಸಿದೆ. ಪ್ರಯಾಣಿಕರು 25 ರೂ. ಪಾವತಿಸಿ 3 ವರ್ಷ ಮಾನ್ಯತೆ ಹೊಂದಿರುವ ಸ್ಮಾರ್ಟ್ ಕಾರ್ಡ್ ಖರೀದಿಸಬೇಕು. ತಿಂಗಳಿಗೆ ಗರಿಷ್ಠ 10 ಸಾವಿರದವರೆಗೆ ರೀಚಾರ್ಜ್ ಮಾಡಿಸಿಕೊಳ್ಳಬಹುದು.
ಇದರಿಂದ ನಿಗಮಕ್ಕೆ ವಾರ್ಷಿಕ 1 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನ ನಿಗಮಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸ್ಮಾರ್ಟ್ ಕಾರ್ಡ್ ವಿಚಾರದಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಹೊಸ ನಿರ್ದೇಶನ ನೀಡುತ್ತಿದೆ.

ಈ ಹಿಂದೆ ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ಸಂಖ್ಯೆ ಸಾಕು ಎಂದು ನಿರ್ದೇನವಿತ್ತು. ಇದೀಗ ಪ್ಯಾನ್ ಸಂಖ್ಯೆ, ಸ್ಮಾರ್ಟ್ ಕಾರ್ಡ್ ಹೊಂದುವವರ ಬಯೋಮೆಟ್ರಿಕ್ ಗುರುತು ಸೇರಿ ಹಲವು ಮಾಹಿತಿಗಳ ಸಂಗ್ರಹಕ್ಕೆ ಸೂಚಿಸಿದೆ. ಇಂತಹ ನಿಯಮ ಅನುಸರಿಸುತ್ತ ಹೋದರೆ ಯೋಜನೆಯೇ ಹಳ್ಳ ಹಿಡಿಯುವ ಆತಂಕ ನಿಗಮಕ್ಕಿದೆ.
ರಿಯಾಯಿತಿ ಸಾಧ್ಯತೆ: ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಪ್ರಯಾಣ ದರದ ಶೇ.15 ರಿಯಾಯಿತಿಯನ್ನು ಬಿಎಂಆರ್‌ಸಿಎಲ್ ನೀಡುತ್ತಿದೆ. ಬಿಎಂಟಿಸಿ ಇದೇ ಮಾದರಿ ಅನುಸರಿಸುವ ಸಾಧ್ಯತೆ ಇದೆ.











Click it and Unblock the Notifications