BMTC: ಮೂರು ತಿಂಗಳಲ್ಲಿ ಬಿಎಂಟಿಸಿ ಪ್ರಯಾಣಿಕರಿಂದ 19 ಲಕ್ಷ ದಂಡ ವಸೂಲಿ!ಕಾರಣ ಇಲ್ಲಿದೆ..
ಬೆಂಗಳೂರು ನವೆಂಬರ್ 28: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದೆ. ಈ ಸೌಲಭ್ಯ ಮಹಿಳೆಯರಿಗೆ ಮಾತ್ರ ಇದ್ದು ಪುರುಷರು ಹಣ ಕೊಟ್ಟು ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ. ಆದರೆ ಸರ್ಕಾರದ ಈ ಯೋಜನೆಯನ್ನು ಬಳಸಿಕೊಳ್ಳಲು ಮಹಿಳೆಯರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ ಕಾರ್ಡ್ ಇಲ್ಲದೆ ಟಿಕೆಟ್ ಪಡೆಯುವುದು, ಮಹಿಳೆಯರ ಸೀಟಿನಲ್ಲಿ ಪ್ರಯಾಣ, ಪಾಸ್ ಇರುವುದಾಗಿ ಸುಳ್ಳು ಹೇಳುವುದು, ಟಿಕೆಟ್ ರಹಿತ ಪ್ರಯಾಣದಂತಹ ಪ್ರಕರಣಗಳಿಗಾಗಿ ಬಿಎಂಟಿಪಿ ದಂಡ ವಿಧಿಸಿದೆ. ಕಳೆದ ಮೂರು ತಿಂಗಳಲ್ಲಿ ಬಿಎಂಟಿಸಿ 17 ಲಕ್ಷ ದಂಡ ವಸೂಲಿ ಮಾಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಕಳೆದ ಮೂರು ತಿಂಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಮತ್ತು ಮಹಿಳೆಯರಿಗೆ ಮಾತ್ರ ಮೀಸಲಾದ ಆಸನಗಳಲ್ಲಿ ಪ್ರಯಾಣಿಸಿದ 10,069 ಪ್ರಯಾಣಿಕರಿಂದ ದಂಡದ ರೂಪದಲ್ಲಿ 17 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆಹಚ್ಚಲು ಬಿಎಂಟಿಸಿಯ ತಪಾಸಣಾ ಸಿಬ್ಬಂದಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬಸ್‌ಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಬಿಎಂಟಿಸಿ ಪ್ರಕಾರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ತಪಾಸಣಾ ಸಿಬ್ಬಂದಿ 57,219 ಟ್ರಿಪ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ 8,891 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡವಾಗಿ 17,96,030 ರೂಗಳನ್ನು ವಸೂಲಿ ಮಾಡಿದ್ದಾರೆ. ಇದೇ ವೇಳೆ ಕರ್ತವ್ಯ ಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧವೂ 5,268 ಪ್ರಕರಣಗಳನ್ನು ದಾಖಲಿಸಲಾಗಿದೆ.
ಟಿಕೆಟ್ ನೀಡದೆ ಇರುವುದಕ್ಕೆ, ಚಿಲ್ಲರೇ ಹಣವನ್ನು ಹಿಂದಿರುಗಿಸದೇ ಇರುವುದಕ್ಕೆ, ಕನ್ನಡ ಬಾರದ ಪ್ರಯಾಣಿಕರಿಗೆ ಮೋಸ ಮಾಡುವುದು ಇದೆಲ್ಲದರ ವಿಚಾರದಲ್ಲಿ ಕಂಡಕ್ಟರ್‌ಗಳ ವಿರುದ್ಧ ದಂಡ ವಿಧಿಸಲಾಗಿದೆ. ಅಲ್ಲದೆ ಬೇರೆ ರಾಜ್ಯದವರಿಗೆ ಫ್ರೀ ಟಿಕೆಟ್ ನೀಡಿರುವುದು, ಕಿವಿಗೆ ಹೆಡ್‌ಫೋನ್ ಹಾಕಿಕೊಳ್ಳುವುದು, ಬಾಯಿ ತುಂಬಾ ಗುಟ್ಕಾ ಹಾಕಿಕೊಳ್ಳುವುದು, ಬಸ್ ನಿಲ್ಲಿಸಿದ ಕಡೆಯಲ್ಲಿ ಮಾತ್ರ ಪ್ರಯಾಣಿಕರು ಇಳಿಯುವಂತೆ ಒತ್ತಾಯಿಸುವುದು, ಮಹಿಳಾ ಪ್ರಯಾಣಿಕರೊಂದಿಗೆ ಜೋರಾಗಿ ಮಾತನಾಡುವುದು, ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಮಾತನಾಡುವ ದೂರುಗಳು ಕೇಳಿ ಬಂದ ಬೆನ್ನಲ್ಲೇ ಪರಿಶೀಲನೆ ವೇಲೆ ಈ ರೀತಿ ನಡೆದುಕೊಂಡ ಕಂಡಕ್ಟರ್‌ಗಳ ವಿರುದ್ಧ ದಂಡ ವಿಧಿಸಲಾಗಿದೆ.
ಅಷ್ಟೇ ಅಲ್ಲದೆ ಮಹಿಳೆಯರ ಮೀಸಲು ಸೀಟ್ನಲ್ಲಿ ಕೂತು ಪ್ರಯಾಣಿಸುತ್ತಿದ್ದವರಿಗೂ ದಂಡ ವಿಧಿಸಲಾಗಿದ್ದು, ಒಟ್ಟು 1,17,800 ರೂ. ದಂಡ ಸಂಗ್ರಹಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಒಟ್ಟು 19,13,830 ರೂ. ದಂಡ ವಸೂಲಿ ಮಾಡಲಾಗಿದೆ.

ಅಲ್ಲದೆ ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ 1,178 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. 1988 ರ MV ಕಾಯಿದೆಯ KMV (ಕರ್ನಾಟಕ ಮೋಟಾರು ವಾಹನ) ನಿಯಮಗಳಿಗೆ ಅನುಸಾರವಾಗಿ 1,17,800 ರೂಪಾಯಿ ದಂಡ ಸಂಗ್ರಹಿಸಲಾಗಿದೆ. "ಒಟ್ಟಾರೆಯಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 10,069 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು ಒಟ್ಟು 19,13,830 ರೂ ಸಂಗ್ರಹಿಸಲಾಗಿದೆ" ಎಂದು ಬಿಟಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications