Namma Metro: ಬೆಂಗಳೂರು ಏರ್‌ಪೋರ್ಟ್‌ಗೆ ಮೆಟ್ರೋ ಸಂಚಾರ ಯಾವಾಗ?
ಬೆಂಗಳೂರು, ನವೆಂಬರ್ 28: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ರೈಲು ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆ. ಇದಕ್ಕಾಗಿ 2026ರ ತನಕ ಕಾಯಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಬಿಎಂಆರ್‌ಸಿಎಲ್ ಎರಡು ಹಂತದಲ್ಲಿ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಕ್ಕೆ ಮುಂದಾಗಿದೆ.
ಬಿಎಂಆರ್‌ಸಿಎಲ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲು ನೀಲಿ ಮಾರ್ಗದ ಯೋಜನೆಯನ್ನು ರೂಪಿಸಿದೆ. ಕೆ. ಆರ್. ಪುರ-ಹೆಬ್ಬಾಳ-ಕೆಐಎ ಟರ್ಮಿನಲ್ ಕಾಮಗಾರಿ ನಡೆಯುತ್ತಿದೆ. 38 ಕಿ. ಮೀ. ನಮ್ಮ ಮೆಟ್ರೋ ಮಾರ್ಗ ಇದಾಗಿದ್ದು, ಒಟ್ಟು 18 ನಿಲ್ದಾಣಗಳನ್ನು ಒಳಗೊಂಡಿದೆ.

ಮನಿ ಕಂಟ್ರೋಲ್ ಜೊತೆ ಬೆಂಗಳೂರು ಏರ್‌ಪೋರ್ಟ್ ಮಾರ್ಗದ ಕುರಿತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ್ ಮಾತನಾಡಿದ್ದಾರೆ, 'ಕೆಐಎ ಟರ್ಮಿನಲ್-ಹೆಬ್ಬಾಳ ಮಾರ್ಗವನ್ನು ಮೊದಲು ಆರಂಭಿಸಲಾಗುತ್ತದೆ. 2026ರ ಜೂನ್‌ನಿಂದ ಸೆಪ್ಟೆಂಬರ್ ಗುರಿ ಹೊಂದಲಾಗಿದೆ. ಹೆಬ್ಬಾಳ-ಕೆ. ಆರ್. ಪುರ ನಡುವಿನ ಮಾರ್ಗ ಡಿಸೆಂಬರ್‌ಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ" ಎಂದು ಹೇಳಿದ್ದಾರೆ.
ಎರಡು ಹಂತದಲ್ಲಿ ಮಾರ್ಗ ಲೋಕಾರ್ಪಣೆ: 38 ಕಿ. ಮೀ. ನೀಲಿ ಮಾರ್ಗದಲ್ಲಿ ಹೆಬ್ಬಾಳ-ಕೆ. ಆರ್. ಪುರಕ್ಕೆ ಹೋಲಿಕೆ ಮಾಡಿದರೆ ಕೆಐಎ ಟರ್ಮಿನಲ್-ಹೆಬ್ಬಾಳ ನಡುವಿನ ಮಾರ್ಗದಲ್ಲಿ ಕಾಮಗಾರಿ ವೇಗವಾಗಿ ಸಾಗಿದೆ. ಆದ್ದರಿಂದ ಪೂರ್ಣ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವ ತನಕ ಕಾಯದೇ ಮೊದಲ ಹಂತದಲ್ಲಿ ಕೆಐಎ ಟರ್ಮಿನಲ್-ಹೆಬ್ಬಾಳ ಮಾರ್ಗವನ್ನು ಮೊದಲು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಈ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರು ನಗರದಿಂದ ಹೆಬ್ಬಾಳಕ್ಕೆ ತಲುಪಿ ಅಲ್ಲಿಂದ ಮೆಟ್ರೋ ಏರಿ ಕೆಐಎ ಟರ್ಮಿನಲ್ ತಲುಪಬಹುದು. ಇದರಿಂದಾಗಿ ರಸ್ತೆ ಮಾರ್ಗದಲ್ಲಿ ಟೋಲ್ ಕಟ್ಟುವುದು ಸಹ ತಪ್ಪಲಿದೆ. ಹೆಬ್ಬಾಳದಲ್ಲಿ 45 ಎಕರೆ ಜಾಗದಲ್ಲಿ ಬಹು ಮಾದರಿ ಸಾರಿಗೆ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಆದರೆ ಈ ಕುರಿತು ಬಿಎಂಆರ್‌ಸಿಎಲ್ ಬಳಿ ಯಾವುದೇ ಅಂತಿಮ ಚಿತ್ರಣವಿಲ್ಲ.
ಈ ಮಾರ್ಗದಲ್ಲಿ ಕೆಲವು ನಿರ್ಮಾಣ ಕಾಮಗಾರಿ ನಿರ್ಬಂಧ ಇರುವ ಕಾರಣ ಯಲಹಂಕ ಏರ್‌ಫೋರ್ಸ್ ನಿಲ್ದಾಣದ ಮೆಟ್ರೋ ಕಾಮಗಾರಿ ಮಾತ್ರ ಸ್ವಲ್ಪ ವಿಳಂಬವಾಗಿದೆ. ಉಳಿದಂತೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಎಂಬೆಸಿ ಗ್ರೂಪ್ ಅನುದಾನ ನೀಡುವ ಕುರಿತು 2020ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತು ಇನ್ನೂ ಸಹ ಮಾತುಕತೆ ನಡೆಯುತ್ತಿದೆ.
ಮೆಟ್ರೋ ಪಿಲ್ಲರ್ ನಿರ್ಮಾಣ ಸ್ಥಳದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಬಳಿಕ ಹೆಬ್ಬಾಳ-ಕೆ. ಆರ್. ಪುರ ನಡುವಿನ ಕಾಮಗಾರಿಯನ್ನು 6 ತಿಂಗಳ ಕಾಲ ನಿಲ್ಲಿಸಲಾಗಿತ್ತು. ಈ ಮಾರ್ಗದ ಕಾಮಗಾರಿ ಹಲವು ಕಾರಣಗಳಿಗೆ ವಿಳಂಬವಾಗುತ್ತಿದೆ. ಈ ಮಾರ್ಗದಲ್ಲಿ ನಿಲ್ದಾಣಗಳ ಅಂತಿಮ ಕೆಲಸಗಳಿಗೆ ಬಿಎಂಆರ್‌ಸಿಎಲ್ ಇನ್ನೂ ಸಹ ಟೆಂಡರ್ ಕರೆದಿಲ್ಲ.
ಬೆಂಗಳೂರು ಏರ್‌ಪೋರ್ಟ್ ಮಾರ್ಗದಲ್ಲಿ ರೈಲು ಓಡಿಸಲು ಬೆಮೆಲ್ 2025ರ ಡಿಸೆಂಬರ್‌ನಲ್ಲಿ ರೈಲುಗಳನ್ನು ಹಸ್ತಾಂತರ ಮಾಡುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣದ ಪ್ರಯಾಣಿಕರು ಲಗೇಜ್ ಸಾಗಣೆ ಮಾಡಲು ಅನುಕೂಲವಾಗುವಂತೆ ಈ ಮಾರ್ಗದ ರೈಲು ಬೋಗಿಯನ್ನು ವಿನ್ಯಾಸಗೊಳಿಸಲಾಗುತ್ತದೆ. ಎರಡು ಸೀಟ್‌ಗಳನ್ನು ಕಡಿಮೆ ಮಾಡಿ, ಅಲ್ಲಿ ಲಗೇಜ್ ಇಡಲು ವ್ಯವಸ್ಥೆ ಮಾಡಲಾಗುತ್ತದೆ.
ವಿಮಾನ ನಿಲ್ದಾಣ ಮಾರ್ಗದಲ್ಲಿ ಕೆ. ಆರ್. ಪುರ, ಕಸ್ತೂರಿ ನಗರ, ಹೊರಮಾವು, ಎಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ್ ನಗರ, ಎಚ್.ಬಿ.ಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಕೆಐಎ ಟರ್ಮಿನಲ್ ನಿಲ್ದಾಣಗಳಿವೆ.












Click it and Unblock the Notifications