Namma Metro: ಸೈಬರ್ ಬೆದರಿಕೆಗೆ ಬಗ್ಗಲ್ಲ ಬೆಂಗಳೂರಿನ ನಮ್ಮ ಮೆಟ್ರೋ
ಬೆಂಗಳೂರು, ನವೆಂಬರ್ 06: ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಬೆದರಿಕೆ ಕರೆಗಳನ್ನು ಪದೇ ಪದೇ ಸ್ವೀಕರಿಸುತ್ತಿವೆ. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ಸೈಬರ್ ಬೆದರಿಕೆಗಳು ಸಹ ಸಾಮಾನ್ಯ. ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿಯಾದ ನಮ್ಮ ಮೆಟ್ರೋ ಇಂತಹ ಸೈಬರ್ ಬೆದರಿಕೆಗೆ ಇನ್ನು ಮುಂದೆ ಬಗ್ಗುವುದಿಲ್ಲ. ಇದಕ್ಕಾಗಿಯೇ ಬಿಎಂಆರ್‌ಸಿಲ್ ಭದ್ರತಾ ಕಾರ್ಯಾಚರಣೆ ಕೇಂದ್ರ (ಎಸ್‌ಒಸಿ)ಯನ್ನು ಸ್ಥಾಪನೆ ಮಾಡಲಿದೆ.
ನಮ್ಮ ಮೆಟ್ರೋ ಡಿಪೋ ಇರುವ ಬೈಯಪ್ಪನಹಳ್ಳಿಯಲ್ಲಿ ಬಿಎಂಆರ್‌ಸಿಎಲ್‌ನ ಮೊದಲ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆಯಾಗಲಿದೆ. ನಮ್ಮ ಮೆಟ್ರೋಗೆ ಬರುವ ಸೈಬರ್ ಬೆದರಿಕೆ, ಐಟಿ ಮತ್ತು ಸಿಸಿಟಿವಿ ಕಣ್ಗಾವಲುಗಳನ್ನು ಈ ಕೇಂದ್ರದ ಮೂಲಕ ನಿರ್ವಹಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದಲ್ಲಿಯೇ ಮೆಟ್ರೋ ಯೋಜನೆಯ ಸೈಬರ್ ಬೆದರಿಕೆ ನಿರ್ವಹಣೆ ಮಾಡಲು ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ ಮಾಡುತ್ತಿರುವುದು ಬೆಂಗಳೂರಿನಲ್ಲಿ ಮಾತ್ರ. ಸೈಬರ್ ಬೆದರಿಕೆ ಅದರಲ್ಲೂ ವಿಶೇಷವಾಗಿ ಎಐ ತಂತ್ರಜ್ಞಾನ ಮತ್ತು ಇತರ ಬೆದರಿಕೆಗಳನ್ನು ಎದುರಿಸುವುದು ಈ ಕೇಂದ್ರದ ಕೆಲಸವಾಗಿದೆ. ಮೆಟ್ರೋ ಜಾಲದ ಸಂಪೂರ್ಣ ನಿಯಂತ್ರಣ ಕೇಂದ್ರದಲ್ಲಿ ಇರಲಿದ್ದು, ಬೆದರಿಕೆಗಳು ಬಂದಾಗ ಅಗತ್ಯ ಸಾಧನಗಳ ಮೂಲಕ ಅದನ್ನು ಪತ್ತೆ ಹಚ್ಚಲಿದೆ.
ಎಷ್ಟು ಮೆಟ್ರೋ ನಿಲ್ದಾಣಗಳು?: ಬೆಂಗಳೂರು ನಗರದಲ್ಲಿ ಸದ್ಯ 66 ಮೆಟ್ರೋ ನಿಲ್ದಾಣಗಳಿವೆ. ಎಲ್ಲಾ ನಿಲ್ದಾಣಗಳಲ್ಲಿ ಸುಮಾರು 200 ಸಿಸಿಟಿವಿ ಕ್ಯಾಮರಾಗಳಿವೆ, ಒಟ್ಟು ಸುಮಾರು 13,200 ಕ್ಯಾಮರಾಗಳನ್ನು ಮೆಟ್ರೋ ನಿಲ್ದಾಣ ಹೊಂದಿದೆ. ರೈಲಿನಲ್ಲಿ ಸಹ 57 ಕ್ಯಾಮರಾಗಳನ್ನು ಹಾಕಲಾಗಿದೆ. 1,200 ಕಂಪ್ಯೂಟರ್‌ನಲ್ಲಿ ಇದು ಸಂಗ್ರಹವಾಗುತ್ತಿದೆ.
ಕೆಲವೇ ದಿನಗಳ ಹಿಂದೆ ಬಿಎಂಆರ್‌ಸಿಎಲ್ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆಗೆ ಟೆಂಡರ್ ಕರೆದಿದೆ. ಸಿಸಿಟಿವಿ, ಸೈಬರ್ ದಾಳಿಯ ಮಾಹಿತಿ ಸಂಗ್ರಹ ಮಾಡುವುದು, ಕಣ್ಗಾವಲು ಇಡುವುದು ಈ ಕೇಂದ್ರದ ಕೆಲಸವಾಗಿದೆ. ಬಿಎಂಆರ್‌ಸಿಎಲ್‌ಗೆ ಬರುವ ಎಲ್ಲಾ ಸೈಬರ್ ಬೆದರಿಕೆಗಳನ್ನು ಈ ಕೇಂದ್ರವೇ ನಿರ್ವಹಣೆ ಮಾಡಲಿದೆ.
ಬಿಎಂಆರ್‌ಸಿಎಲ್‌ನ ಎಲ್ಲಾ ಐಟಿ, ಸಿಸಿಟಿವಿ ವ್ಯವಸ್ಥೆ ಈ ಕೇಂದ್ರದ ಅಡಿಯಲ್ಲಿ ಬರುತ್ತದೆ. ಒಂದು ವೇಳೆ ಸೈಬರ್ ದಾಳಿ ನಡೆದರೆ ಅದರ ಬಗ್ಗೆ ಕೇಂದ್ರ ಅಧ್ಯಯನವನ್ನು ನಡೆಸಲಿದೆ. ಬೆದರಿಕೆ, ದಾಳಿಯ ಸಂದರ್ಭದಲ್ಲಿ ಐಪಿ ಅಡ್ರೆಸ್ ಹುಡುಕಲು ಸರ್ಕಾರಿ ಸಂಸ್ಥೆಗಳು ಈ ಕೇಂದ್ರಕ್ಕೆ ಅಗತ್ಯ ಸಹಕಾರವನ್ನು ನೀಡಲಿವೆ.
ಮೆಟ್ರೋ ನಿಲ್ದಾಣಗಳ ಮೇಲೆ ಪರಿಣಾಮಕಾರಿ ಕಣ್ಗಾವಲು ಮತ್ತು ಮೆಟ್ರೋ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಕೇಂದ್ರ ಖಾತ್ರಿ ಪಡಿಸಲಿದೆ. ಬೆದರಿಕೆ ಅಥವ ದಾಳಿ ಮೆಟ್ರೋ ಜಾಲದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಬೆದರಿಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ದೃಢವಾದ ಭದ್ರತಾ ಕೇಂದ್ರದ ಅಗತ್ಯತೆ ಬೆಂಗಳೂರು ಮೆಟ್ರೋಗೆ ಇತ್ತು. ಮುಂದಿನ ಹಂತದಲ್ಲಿ ಕ್ಯೂಆರ್ ಟಿಕೆಟಿಂಗ್ ಮೂಲಕ ಪ್ರಯಾಣಿಕರ ಸಂಖ್ಯೆಯ ಮೇಲ್ವಿಚಾರಣೆ ಮಾಡುವುದು ಸೇರಿದಂತೆ ಕಾರ್ಯಾಚರಣೆಗೆ ತಂತ್ರಜ್ಞಾನದ ಸಹಾಯವನ್ನು ಕೇಂದ್ರ ಒದಗಿಸಲಿದೆ.
ಸೈಬರ್ ಬೆದರಿಕೆ, ದಾಳಿಗಳ ಮೂಲಕ ರೈಲ್ವೆ ಜಾಲದ ಮೇಲೆ ಪರಿಣಾಮ ಬೀರಿದ ಹಲವು ಘಟನೆಗಳು ನಡೆದಿವೆ. ತಂತ್ರಜ್ಞಾನ ಮುಂದುವರೆಯುತ್ತಿರುವ ದಿನಗಳಲ್ಲಿ ಇಂತಹ ಬೆದರಿಕೆಗಳು ಭವಿಷ್ಯದಲ್ಲಿ ಮೆಟ್ರೋಗೂ ಬರಬಹುದು ಎಂದು ಅಂದಾಜಿಸಲಾಗಿದ್ದು, ಅದಕ್ಕಾಗಿಯೇ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೇಂದ್ರದಲ್ಲಿ ನುರಿತ ಸೈಬರ್ ತಜ್ಞರು ಕೆಲಸ ಮಾಡಲಿದ್ದಾರೆ.
ವಿವಿಧ ಮೂಲಗಳಿಂದ ಸಂಗ್ರಹ ಮಾಡಿದ ದತ್ತಾಂಶಗಳನ್ನು ಸಂಸ್ಕರಣೆ ಮಾಡುವುದು. ಅನುಮಾಸ್ಪದ ನಡೆಗಳು ಕಂಡುಬಂದರೆ ಎಚ್ಚರಿಸುವುದು. ಸುಧಾರಿತ ತಂತ್ರಜ್ಞಾನದ ಮೂಲಕ ಸಂಭಾವ್ಯ ಬೆದರಿಕೆ, ದಾಳಿಗಳನ್ನು ಗುರುತಿಸುವುದು ಮುಂತಾದ ಕಾರ್ಯಗಳನ್ನು ಈ ಕೇಂದ್ರ ಮಾಡಲಿದೆ.
ಭವಿಷ್ಯದಲ್ಲಿ ಇಂತಹ ದಾಳಿಯ ಘಟನೆಗಳನ್ನು ತಪ್ಪಿಸಲು ಅಗತ್ಯವಾದ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಸಹ ಕೇಂದ್ರ ಸಲಹೆಗಳನ್ನು ನೀಡಲಿದೆ. ಬಿಎಂಆರ್‌ಸಿಎಲ್ ಐಟಿ ತಂಡಗಳು ಮತ್ತು ಭದ್ರತಾ ವಿಶ್ಲೇಷಕರ ನಡುವಿನ ಸಮನ್ವಯವನ್ನು ಸಹ ಈ ಕೇಂದ್ರ ನಿರ್ವಹಣೆ ಮಾಡಲಿದೆ. ದೋಷಗಳನ್ನು ಗುರುತಿಸುವುದು, ದೋಷ ಪೂರಿತ ತಂತ್ರಾಂಶ ಅಪ್‌ಡೇಟ್ ಮಾಡುವುದು ಮುಂತಾದವುಗಳನ್ನು ಕೇಂದ್ರ ನೋಡಿಕೊಳ್ಳಲಿದೆ.












Click it and Unblock the Notifications