ಮೆಟ್ರೋ 2ನೇ ಹಂತ: ಸುರಂಗ ಮಾರ್ಗಕ್ಕೆ ಮರು ಟೆಂಡರ್
ಬೆಂಗಳೂರು, ಜೂನ್ 16: ಎರಡನೇ ಹಂತದಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ರದ್ದಾಗಿತ್ತು, ಆದರೆ ಕಾಮಗಾರಿ ಮರುಹುಟ್ಟು ಪಡೆದಿದೆ.
ಆದರೆ ಅದರ ಉದ್ದವನ್ನು ಕಡಿತಗೊಳಿಸಿ ಸುರಂಗ ಮಾರ್ಗದ ಉದ್ದವನ್ನು ಕಡಿಮೆ ಮಾಡಿ ವಿನ್ಯಾಸ ಬದಲಿಸಿರುವ ಬಿಎಂಆರ್‌ಸಿಎಲ್, ಟೆಂಡರ್ ಕರೆಯಲು ಅನುಮತಿ ನೀಡುವಂತೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗೆ ಕೇಳಿದೆ.
ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 21.42 ಕಿ.ಮೀ ಉದ್ದದ ಮಾರ್ಗದಲ್ಲಿ 13.91 ಕಿ.ಮೀ ಸುರಂಗ ಮಾರ್ಗ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಅದು ಅತಿ ಉದ್ದವಾದ ಸುರಂಗ ಮಾರ್ಗವಾಗಿರುವುದದರಿಂದ ಖರ್ಚು ಹೆಚ್ಚಿದೆ.

ನಾಲ್ಕು ಪ್ಯಾಕೇಜ್‌ಗಳ ಟೆಂಡರ್ ಕರೆದಾಗ ಅರ್ಜಿ ಹಾಕಿದ ಕಂಪನಿಗಳು ಅಂದಾಜು ಮೊತ್ತದ ಶೇ.50ಕ್ಕಿಂತ ಅಧಿಕ ಮೊತ್ತವನ್ನು ಉಲ್ಲೇಖಿಸಿದ್ದವು. ಕೊನೆಗೆ ಅನಿವಾರ್ಯವಾಗಿ ಟೆಂಡರ್ ರದ್ದುಗೊಳಿಸಬೇಕಾಯಿತು.
ಈ ಸಮಸ್ಯೆ ಪುನರಾವರ್ತನೆಯಾಗದಿರಲು ಮಾರ್ಗದ ವಿನ್ಯಾಸವನ್ನೇ ಬದಲಿಸಲಾಗಿದೆ. ಡೇರಿ ವೃತ್ತ-ನಾಗವಾರ ಮಾರ್ಗದಲ್ಲಿ ಸುರಂಗ ಕೊರೆಯುವ ಬದಲು ವೆಲ್ಲಾರ ಜಂಕ್ಷನ್ ಬಳಿಯ ಫಾತಿಮಾ ಬೇಕರಿಯಿಂದ ಟ್ಯಾನರಿ ರಸ್ತೆವರೆಗೆ 4-5 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲು ತೀರ್ಮಾನಿಸಲಾಗಿದೆ.
ಅಂದಾಜು 11,014 ಕೋಟಿ ರೂ. ವೆಚ್ಚದಲ್ಲಿಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ 3,500 ಕೋಟಿ ರೂ. ಸಾಲ ನೀಡುತ್ತಿದೆ. ಒಂದು ಕಿ.ಮೀ ಸುರಂಗ ಮಾರ್ಗ ಮಾಡಲು 500 ಕೋಟಿ ರೂ. ಹಾಗೂ ಎಲಿವೇಟೆಡ್ ಮಾರ್ಗಕ್ಕೆ 192 ಕೋಟಿ ರೂ. ಖರ್ಚಾಗುತ್ತಿದೆ. ಸುರಂಗದ ಉದ್ದ ಕಡಿಮೆಯಾಗಲಿದೆ. ಈ ಮಾರ್ಗವನ್ನು 2022ರ ಒಳಗೆ ನಿರ್ಮಿಸಬೇಕೆಂಬ ಉದ್ದೇಶವಿತ್ತು. ಹಾಗಾಗಿ ಬೇಗ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ.












Click it and Unblock the Notifications