Purple Line Metro; ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿ, ಕಹಿಸುದ್ದಿ!
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ರೈಲುಗಳ ಕೊರತೆ ಎದುರಿಸುವ ನಿರೀಕ್ಷೆ ಇದೆ. ರೈಲು ಸಂಚಾರ ಆರಂಭವಾಗಿದೆ ಎನ್ನುವ ಸಂತಸದ ಜೊತೆ ರೈಲಿಗಾಗಿ ಕಾಯಬೇಕಾದ ಪರಿಸ್ಥಿತಿ ಬರಲಿದೆ.
ಬೆಂಗಳೂರು, ಫೆಬ್ರವರಿ 21; ನಮ್ಮ ಮೆಟ್ರೋ ಬೆಂಗಳೂರು ನಗರದ ಜೀವನಾಡಿಯಾಗಿ ಬದಲಾಗುತ್ತಿದೆ. ನಗರದ ಸಂಚಾರ ದಟ್ಟಣೆ ಕಿರಿಕಿರಿಗೆ ಮೆಟ್ರೋ ವರದಾನವಾಗುತ್ತಿದೆ. ಪ್ರತಿದಿನ ಲಕ್ಷಾಂತರ ಜನರು ನೇರಳೆ, ಹಸಿರು ನಮ್ಮ ಮೆಟ್ರೋ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದಾರೆ.
2023ರ ಆರಂಭದಲ್ಲಿಯೇ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿ ಮತ್ತು ಕಹಿ ಸುದ್ದಿಯೊಂದಿದೆ. ಮುಂದಿನ 4 ತಿಂಗಳಿನಲ್ಲಿ ವೈಟ್‌ಫೀಲ್ಡ್-ಬೈಯ್ಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂಬುದು ಸಿಹಿ ಸುದ್ದಿಯಾಗಿದೆ.
ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ನೇರಳೆ ಮಾರ್ಗದಲ್ಲಿ ರೈಲುಗಳ ಕೊರತೆ ಎದುರಿಸುತ್ತಿದೆ. ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಪೀಕ್ ಅವರ್‌ನಲ್ಲಿ ನಿರೀಕ್ಷೆ ಮಟ್ಟದಲ್ಲಿ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲ ಎಂಬುದು ಕಹಿಸುದ್ದಿ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ರೈಲುಗಳ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, "ವೈಟ್‌ಫೀಲ್ಡ್ ಮಾರ್ಗದಲ್ಲಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಓಡಿಸಲಾಗುತ್ತದೆ. ಜೂನ್ ಅಥವ ಜುಲೈ ತಿಂಗಳಿನಲ್ಲಿ 3 ರಿಂದ 4 ಸೆಟ್ ರೈಲುಗಳು ಸಿಗಲಿವೆ. ಬಳಿಕ ಉಳಿದ ರೈಲುಗಳು ಹಂತ-ಹಂತವಾಗಿ ಆಗಮಿಸಲಿವೆ" ಎಂದು ಹೇಳಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋ ಜಾಲ
ಬೆಂಗಳೂರು ನಗರದಲ್ಲಿ ಪ್ರಸ್ತುತ ಬಿಎಂಆರ್‌ಸಿಎಲ್ 56 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸುತ್ತಿದೆ. ಜೂನ್ ತಿಂಗಳಿನಲ್ಲಿ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ 15 ಕಿ. ಮೀ. ಸಂಪೂರ್ಣ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಇದೆ.
ಕೆಂಗೇರಿ-ಚಲ್ಲಘಟ್ಟ 1.5 ಕಿ. ಮೀ. ಮಾರ್ಗ ಮೇ ತಿಂಗಳಿನಲ್ಲಿ, ಬಳಿಕ ನಾಗಸಂದ್ರ-ಮಾದಾವರ 3 ಕಿ. ಮೀ. ನಮ್ಮ ಮೆಟ್ರೋ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. 19 ಕಿ. ಮೀ. ಆರ್. ವಿ. ರಸ್ತೆ-ಬೊಮ್ಮಸಂದ್ರ ಸೇರಿದಂತೆ 2023ರಲ್ಲಿ 75.3 ಕಿ. ಮೀ. ಮಾರ್ಗಕ್ಕೆ ಮೆಟ್ರೋ ಜಾಲ ವಿಸ್ತರಣೆಯಾಗಲಿದೆ.

ರೈಲುಗಳ ಸಂಚಾರದ ಸಮಯ
ನೇರಳೆ ಮಾರ್ಗದಲ್ಲಿ ಪ್ರಸ್ತುತ ಪೀಕ್ ಅವರ್‌ನಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿ 3-4 ನಿಮಿಷ. ಆದರೆ ಹಸಿರು ಮಾರ್ಗದಲ್ಲಿ ಸಂಚಾರದ ಅವಧಿ 5 ನಿಮಿಷಗಳು. ಪೀಕ್ ಅವರ್ ಅಲ್ಲದ ಸಮಯದಲ್ಲಿ 8-10 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಓಡುತ್ತಿವೆ.
ಬೈಯ್ಯಪ್ಪನಳ್ಳಿ-ಕೆಂಗೇರಿ, ನಾಗಸಂದ್ರ-ಸಿಲ್ಕ್ ಇನ್ಸ್‌ಟಿಟ್ಯೂಟ್ ನಡುವೆ ಸದ್ಯ ರೈಲು ಓಡುತ್ತಿದೆ. ಹಸಿರು ಮತ್ತು ನೇರಳೆ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾದರೆ ಬಿಎಂಆರ್‌ಸಿಎಲ್‌ಗೆ ರೈಲುಗಳು ಕೊರತೆ ಉಂಟಾಗಲಿದೆ.

ಎಷ್ಟು ರೈಲುಗಳು ಓಡುತ್ತಿವೆ?
ಬಿಎಂಆರ್‌ಸಿಎಲ್‌ಗೆ ಪೀಕ್ ಅವರ್‌ನಲ್ಲಿ 3-4 ನಿಮಿಷಕ್ಕೆ ರೈಲು ಓಡಿಸಲು 1 ಕಿ. ಮೀ.ಗೆ ಒಂದು ರೈಲಿನ ಅವಶ್ಯಕತೆ ಇದೆ. ನಮ್ಮ ಮೆಟ್ರೋ ಮೊದಲ ಹಂತದ ಯೋಜನೆಯಲ್ಲಿ 45 ಕಿ. ಮೀ.ಗೆ 50 ರೈಲುಗಳನ್ನು ಬಿಎಂಆರ್‌ಸಿಎಲ್ ಹೊಂದಿದೆ. ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಆರಂಭವಾದರೆ ಮೆಟ್ರೋ ಮಾರ್ಗ 70 ಕಿ. ಮೀ.ಗೆ ವಿಸ್ತರಣೆಯಾಗಲಿದ್ದು, ರೈಲಿನ ಸಂಖ್ಯೆ 57 ಆಗಲಿದೆ.
ಮೆಟ್ರೋ ಮಾರ್ಗ ವಿಸ್ತರಣೆ ಬಳಿಕ ಮೆಜೆಸ್ಟಿಕ್‌ನ ಇಂಟರ್ ಚೇಂಜ್ ನಿಲ್ದಾಣದಲ್ಲಿ ಜನದಟ್ಟಣೆಯೂ ಅಧಿಕವಾಗಲಿದೆ. ರೈಲುಗಳ ಸಂಚಾರದ ಅವಧ ಹೆಚ್ಚಾದರೆ, ಕಾಯುವ ಸಮಯವೂ ಅಧಿಕವಾಗಿ ರೈಲುಗಳು ಸಹ ಜನರಿಂದ ತುಂಬಿ ಹೋಗಲಿವೆ.

ರೈಲುಗಳ ತಯಾರಿಕೆ ವಿಳಂಬ ಏಕೆ?
ಡಿಸೆಂಬರ್ 2019ರಲ್ಲಿ ಚೀನಾ ಮೂಲದ ಸಿಆರ್‌ಆರ್‌ಸಿ ಬಿಎಂಆರ್‌ಸಿಎಲ್‌ನಿಂದ 216 ರೈಲು ಒದಗಿಸಲು ಟೆಂಡರ್ ಪಡೆಯಿತು. ಒಪ್ಪಂದದಂತೆ 87 ವಾರದಲ್ಲಿ ಮೊದಲ ರೈಲನ್ನು ಕಂಪನಿ ನೀಡಬೇಕಿತ್ತು. ಆದರೆ ಈ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
ಅಲ್ಲದೇ 'ಮೇಕ್ ಇನ್ ಇಂಡಿಯಾ' ನಿಯಮದಂತೆ ಸ್ಥಳೀಯವಾಗಿಯೇ ಶೇ 75ರಷ್ಟು ರೈಲು ಉತ್ಪಾದನೆ ಮಾಡಲು ಕಂಪನಿಗೆ ಭಾರತದಲ್ಲಿ ಸರಿಯಾದ ತಯಾರಕರು ಸಿಗಲಿಲ್ಲ. ಬಳಿಕ ಕೋವಿಡ್ ಪರಿಸ್ಥಿತಿ, ಎಫ್‌ಡಿಐ ಹೂಡಿಕೆ ನಿಯಮಗಳಲ್ಲಿನ ಬದಲಾವಣೆಗಳ ಕಾರಣ ರೈಲು ತಯಾರಿಕೆ ವಿಳಂಬವಾಗುತ್ತಿದೆ.












Click it and Unblock the Notifications