Namma Yatri- BMRCL: ಮೆಟ್ರೋ ಪ್ರಯಾಣಿಕರಿಗಾಗಿ ಒಂದಾಗುತ್ತಿದೆ ನಮ್ಮ ಯಾತ್ರಿ ಮತ್ತು ಬಿಎಂಆರ್‌ಸಿಎಲ್
ಬೆಂಗಳೂರು, ಮೇ. 18: ಸದ್ಯ ಸಿಲಿಕಾನ್ ಸಿಟಿ ಜನರ ನೆಚ್ಚಿನ 'ನಮ್ಮ ಯಾತ್ರಿ' ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಲಿದೆ.
ಹೌದು... ನಗರದಲ್ಲಿ ಮೆಟ್ರೋ ನಿಲ್ದಾಣಗಳಿಗೆ ಕೊನೆಯ ಮೈಲಿ ಸಂಪರ್ಕದ ಅಂತರವನ್ನು ಸರಿಪಡಿಸಲು ಆಟೋರಿಕ್ಷಾ ಸೇವೆಗಳನ್ನು ಒದಗಿಸಲಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಬಿಎಮ್‌ಆರ್‌ಸಿಎಲ್ ಕೈಜೋಡಿಸಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಸುರಕ್ಷಿತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೇವೆ ನೀಡಲು ಯೋಜನೆ ರೂಪಿಸುತ್ತಿದೆ.

ನಮ್ಮ ಯಾತ್ರಿ- ನಮ್ಮ ಮೆಟ್ರೋ- ಬೆಂಗಳೂರು ಟ್ರಾಫಿಕ್ ಪೊಲೀಸ್
ಹೊಸ ಯೋಜನೆಯ ಅಂಗವಾಗಿ, ಮೂವಿಂಗ್ ಟೆಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ನಮ್ಮ ಯಾತ್ರಿ, ಮೇ ಅಂತ್ಯದ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಈ ಸೇವೆಯು ಆಟೋ ರಿಕ್ಷಾ ಚಾಲಕರು 'ಕ್ಯೂ' ವ್ಯವಸ್ಥೆಯನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಂದ ಸೇವೆ ನೀಡುತ್ತಾರೆ. ಸರದಿಯಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದರೆ, ಚಾಲಕರು ಸಾಮಾನ್ಯ ರೈಡ್ ತೆಗೆದುಕೊಳ್ಳಬಹುದು.
"ಬಿಎಂಆರ್‌ಸಿಎಲ್, ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ನಮ್ಮ ಯಾತ್ರಿಯೊಂದಿಗೆ ಮೆಟ್ರೋ ಪ್ರಯಾಣಿಕರಿಗಾಗಿ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಬುಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲು ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಕೊನೆಯ ಮೈಲಿ ಸಂಪರ್ಕಗಳನ್ನು ಒದಗಿಸುವುದು ಇದರ ಪ್ರಸ್ತಾವನೆಯಾಗಿದೆ" ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಮೊದಲ ಪ್ರಯೋಗ ಇಂದಿರಾ ನಗರ ಮೆಟ್ರೋ ಸ್ಟೇಷನ್‌ನಲ್ಲಿ ನಡೆಯಲಿದೆ. ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮತ್ತು ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಬಿಎಂಆರ್‌ಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದೆ. ಯಶಸ್ಸಿನ ಆಧಾರದ ಮೇಲೆ, ಸೌಲಭ್ಯವನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಯಾತ್ರಿಯ ಅಧಿಕಾರಿಯೊಬ್ಬರು, "ನಮ್ಮ ಸಮೀಕ್ಷೆಗಳು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್‌ಗಳು ಅಷ್ಟು ಪರಿಣಾಮಕಾರಿಯಾಗಿಲ್ಲ ಮತ್ತು ಕೊನೆಯ ಮೈಲಿ ಸಂಪರ್ಕದ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಸೂಚಿಸಿವೆ.
ಕಳೆದ ವರ್ಷ, ಆಟೋ ರಿಕ್ಷಾ ಚಾಲಕರ ಒಕ್ಕೂಟವು ಲಾಸ್ಟ್ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ಮಿತ್ರವನ್ನು ಪ್ರಾರಂಭಿಸಿತು ಆದರೆ ಸಾಕಷ್ಟು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಿತು. ನಮ್ಮ ಯಾತ್ರಿ ಸೇವೆ ವಿಭಿನ್ನವಾಗಿದ್ದು, ಮೆಟ್ರೋ ಮಿತ್ರ ಯಶಸ್ವಿಯಾಗದಿರುವಲ್ಲಿ ಈ ಯೋಜನೆ ಯಶಸ್ವಿಯಾಗುವ ಗುರಿ ಹೊಂದಿದೆ.
ದಿನ 40 ಲಕ್ಷ ಮಂದಿ ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, 134 ಮೆಟ್ರೋ ಫೀಡರ್ ಬಸ್‌ಗಳಲ್ಲಿ 76,000 ಪ್ರಯಾಣಿಕರು ಮಾತ್ರ ಬಳಸುತ್ತಾರೆ. ಮೆಟ್ರೋ ಪ್ರಯಾಣಿಕರು ಮತ್ತು ಮೆಟ್ರೋ ಫೀಡರ್ ಬಸ್‌ಗಳ ಪ್ರಯಾಣಿಕರಿಗೆ ಹೋಲಿಸಿದರೆ ಕಡಿಮೆ ಸಂಖ್ಯೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಆಟೋ ರಿಕ್ಷಾ ಚಾಲಕರು ಕಡಿಮೆ ದೂರಕ್ಕೆ ಹೆಚ್ಚಿನ ದರ ವಿಧಿಸುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದಿನ ಪ್ರಿಪೇಯ್ಡ್ ಆಟೋ ಸೇವೆಗಳು ಹೆಚ್ಚು ಜನಪ್ರಿಯವಾಘದಿರಲು ಇದು ಕೂಡ ಒಂದು ಕಾರಣ. ಹೀಗಾಗಿ 'ನಮ್ಮ ಯಾತ್ರಿ' ಜೊತೆಗೆ ಮೆಟ್ರೋ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಬಿಎಂಆರ್‌ಸಿಎಲ್ ಚಿಂತಿಸುತ್ತಿದೆ.












Click it and Unblock the Notifications