ನಮ್ಮ ಮೆಟ್ರೋ: ನೀವು ಉಗಿತಿರಾ ಅಂದ್ರೆ ದಂಡ ಕಟ್ಟಲು ಸಜ್ಜಾಗಿ...
ಬೆಂಗಳೂರು, ಮೇ 04: ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ಬೆಂಗಳೂರು ಮಟ್ರೋ ರೈಲು ನಿಗಮ (BMRCL) ದಂಡ ವಿಧಿಸಿದೆ. ಈ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಕೋರಿದೆ. ಇತ್ತೀಚೆಗಷ್ಟೇ ಮೆಟ್ರೋ ಹೊಸ ನಿರ್ಧಾರ ಪ್ರಟಿಸಿದ್ದು, ಅದರ ಪ್ರಕಾರ, ಮೆಟ್ರೋ ಆವರಣ, ನಿಲ್ದಾಣ, ರೈಲಿನೊಳಗೆ ಸ್ವಚ್ಛತೆ ಕಾಪಾಡದವರಿಗೆ ಅದರಲ್ಲೂ ಪಾನ್‌ಮಸಾಲ, ಗುಟ್ಕಾ ಇತರ ತಂಬಾಕು ಉತ್ಪನ್ನ ತಿಂದು ಉಗಿಯುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಲಾಗಿದೆ.
ಮೇ 2 ಶುಕ್ರವಾರ ಸಂಜೆ ಸುಮಾರು 6:30 ಗಂಟೆಗೆ ನಮ್ಮ ಮೆಟ್ರೋ ಹಸಿರು ಮಾರ್ಗದ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 01ರ ಲಿಫ್ಟ್ ಬಳಿಯಲ್ಲಿ ವ್ಯಕ್ತಿಯೊಬ್ಬ ಪಾನ್ ಮಸಾಲಾ ಅಗಿದು ಉಗಿದಿದ್ದ. ಈ ಪ್ರಯಾಣಿಕನನ್ನು ಪತ್ತೆ ಮಾಡಿದ ನಮ್ಮ ಮೆಟ್ರೋ ಸಿಬ್ಬಂದಿ/ಅಧಿಕಾರಿಗಳು ದಂಡ ವಿಧಿಸಿ ಕ್ರಮ ಜರುಗಿಸಿದ್ದಾರೆ. ಆತನಿಗೆ ಸ್ವಚ್ಚತೆ ಪಾಠ ಮಾಡಿದ್ದಾರೆ.

ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ.
ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೆಟ್ರೋದಲ್ಲಿ ಓಡಾಡುವ ಎಲ್ಲ ದೈಣಂದಿನ ಪ್ರಯಾಣಿಕರು ಸಹಕರಿಸಬೇಕು. ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ಭಾನುವಾರ ವಿನಂತಿಸಿಕೊಂಡಿದೆ.
ಊಟ ಮಾಡಿ 500 ರೂ. ದಂಡ ಕಟ್ಟಿದ ಯುವತಿ
ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಇದೇ ಹಸಿರು ಮಾರ್ಗದಲ್ಲಿ ನಾಗಸಂದ್ರ ಕಡೆಗಿಂತ ಬಂದಿದ್ದ ಯುವತಿಯೊಬ್ಬರು ಚಲಿಸುತ್ತಿರುವ ಮೆಟ್ರೋದಲ್ಲಿ ಆಹಾರ ಸೇವಿಸಿದ್ದರು. ಇದರ ವಿಡಿಯೋ ಅನ್ನು ಸಹ ಪ್ರಯಾಣಿಕರೊಬ್ಬರ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅವರನ್ನು ಪತ್ತೆ ಮಾಡಿ 500 ರೂಪಾಯಿ ದಂಡ ವಿಧಿಸಲಾಗಿದೆ. ಮೊನ್ನೆ ಮೆಟ್ರೋ ಆವರಣದಲ್ಲಿ ಉಗಿದ ವ್ಯಕ್ತಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿಲ್ಲ.
ಕೆಲವು ದಿನಗಳ ಹಿಂದೆ ನಮ್ಮ ಮೆಟ್ರೋದಲ್ಲಿ ಸಂಚರಿಸುವ ವೇಳೆ ಪಾನ್ ಮಸಾಲ ಹಾಕಿಕೊಂಡಿದ್ದ ಪುರುಷರೊಬ್ಬರು ವಿಡಿಯೋ ವೈರಲ್ ಆಗಿತ್ತು. ಸಹ ಪ್ರಯಾಣಿಕರು ನೀವು ಹೀಗೆ ಮಾಡಿ ಸ್ವಚ್ಚತೆ ಹಾಳು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ನಿಗಮದ ಅಧಿಕಾರಿಗಳು 500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಬಳಿಕ ಮೆಟ್ರೋ ನಿಲ್ದಾಣ, ಆವರಣದಲ್ಲಿ ತಂಬಾಕು ಉತ್ಪನ್ನ ಬಳಕೆ, ಅಗಿಯುವುದು, ಉಗಿಯುವುದನ್ನು ನಿಷೇಧಿಸಲಾಗಿದೆ. ನಿಯಮ ಪಾಲಿಸಬೇಕು. ಉಲ್ಲಂಘಿಸಿದರೆ ದಂಡದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.












Click it and Unblock the Notifications