Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಪಾರ್ಕಿಂಗ್‌ನಲ್ಲಿ ರಿಯಾಯಿತಿ
ಬೆಂಗಳೂರು, ಅಕ್ಟೋಬರ್ 14: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಸಂಚಾರಕ್ಕೆ ತಯಾರಾಗಿರುವ ಎರಡು ಮಾರ್ಗದಲ್ಲಿ ರೈಲುಗಳು ಓಡಲು ಆರಂಭವಾದರೆ ಡಿಸೆಂಬರ್ ವೇಳೆಗೆ ಪ್ರತಿದಿನ ಸುಮಾರು 9 ಲಕ್ಷ ಜನರು ಮೆಟ್ರೋ ಬಳಕೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ವಾಹನಗಳ ಪಾರ್ಕಿಂಗ್‌ನದ್ದು. ಇದನ್ನು ಬಗೆಹರಿಸಲು ಈಗ ಬಿಎಂಆರ್‌ಸಿಎಲ್ ಮುಂದಾಗಿದೆ.
ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ನಿಲ್ದಾಣದ ಸಮೀಪದ ವಾಹನಗಳನ್ನು ಪಾರ್ಕಿಂಗ್ ಮಾಡಲು ಹೊಸ ಪಾರ್ಕಿಂಗ್ ನೀತಿಯನ್ನು ರೂಪಿಸಿದೆ. ಇದನ್ನು ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿಯೂ ಹಾಕಲಾಗಿದ್ದು, ಜನರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 18ರ ತನಕ ಆಕ್ಷೇಪಣೆ ಸಲ್ಲಿಕೆ ಮಾಡಬಹುದು.

ಈ ಕರಡು ನೀತಿ ನಮ್ಮ ಮೆಟ್ರೋ ನಿಲ್ದಾಣದ ಸುತ್ತಲಿನ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಹೆಚ್ಚಿನ ಜನರು ಮೆಟ್ರೋ ಬಳಕೆ ಮಾಡುವಂತೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಲವು ಹೊಸ ಸೌಲಭ್ಯಗಳನ್ನು ವಾಹನ ಪಾರ್ಕ್ ಮಾಡುವವರಿಗೆ ನೀಡಲಾಗುತ್ತದೆ. ಅಲ್ಲದೇ ವಾಹನಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲು ನೀತಿಯಲ್ಲಿ ಪ್ರಸ್ತಾವನೆಗಳಿವೆ. ನಮ್ಮ ಮೆಟ್ರೋ ಪ್ರಯಾಣಿಕರು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಎಂದು ಕಾದು ನೋಡಬೇಕಿದೆ.
ರಿಯಾಯಿತಿ ಸೌಲಭ್ಯಗಳು: ಬಿಎಂಆರ್‌ಸಿಎಲ್ ಬೆಂಗಳೂರು ನಗರದಲ್ಲಿ ಹಲವು ನಮ್ಮ ಮೆಟ್ರೋ ನಿಲ್ದಾಣದ ಸುತ್ತಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಇದರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಿದೆ. ಆದರೆ ನಮ್ಮ ಮೆಟ್ರೋ ಪ್ರಯಾಣಿಕರಲ್ಲದವರು ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರಿಗೆ ಪಾರ್ಕಿಂಗ್ ಸೌಲಭ್ಯಗಳು ಸಿಗದಂತೆ ಆಗುತ್ತಿದೆ. ಈ ಕುರಿತು ಹಲವು ದೂರುಗಳು ಸಹ ಸಲ್ಲಿಕೆಯಾಗಿವೆ.
ಆದ್ದರಿಂದ ನೂತನ ಪಾರ್ಕಿಂಗ್ ನೀತಿಯಲ್ಲಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ಮೆಟ್ರೋ ಪ್ರಯಾಣಿಕರು ಮಾತ್ರ ವಾಹನ ನಿಲ್ಲಿಸುವಂತೆ ನಿಯಮವನ್ನು ಪರಿಚಯಿಸಲಿದೆ. ನಗರದ ಯಾವ-ಯಾವ ಮೆಟ್ರೋ ನಿಲ್ದಾಣದಲ್ಲಿ ವಾಹನದ ಪಾರ್ಕಿಂಗ್‌ಗೆ ಬೇಡಿಕೆ ಹೆಚ್ಚಿದೆ? ಎಂಬುದನ್ನು ಪರಿಶೀಲಿಸಿ ನೀತಿಯನ್ನು ರೂಪಿಸಲಾಗಿದೆ.
ನಮ್ಮ ಮೆಟ್ರೋ ನಿಲ್ದಾಣದ ಸುತ್ತಲೂ ಪ್ರಯಾಣಿಕರ ಅನುಕೂಲಕ್ಕಾಗಿ 'ಪಾರ್ಕ್ ಎಂಡ್ ರೈಡ್' ಮಾದರಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಬೈಕ್, ಕಾರು ಮತ್ತು ಸೈಕಲ್‌ಗಳಿಗಾಗಿ ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ. ವಾಹನ ನಿಲ್ಲಿಸಿದ ಸ್ಥಳದಲ್ಲಿ 24*7 ಕ್ಯಾಮರಾ ಕಣ್ಗಾವಲು, ತುರ್ತು ಸಂದರ್ಭದಲ್ಲಿ ಕರೆ ಮಾಡಲು ವ್ಯವಸ್ಥೆ, ಅಗ್ನಿ ಅನಾಹುತ ಸಂಭವಿಸದಂತೆ ಎಚ್ಚರಿಕೆ ಮುಂತಾದ ವ್ಯವಸ್ಥೆ ಮಾಡಲಾಗುತ್ತದೆ.
ಮೆಟ್ರೋದಲ್ಲಿ ದೂರ ಪ್ರಯಾಣಿಸುವ ಜನರು ಹೆಚ್ಚು ಹೊತ್ತು ಪಾರ್ಕಿಂಗ್ ಲಾಟ್‌ಗಳಲ್ಲಿ ವಾಹನ ನಿಲ್ಲಿಸುತ್ತಾರೆ. ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಪಾರ್ಕಿಂಗ್ ಶುಲ್ಕದಲ್ಲಿ ರಿಯಾಯಿತಿ ನೀಡುವುದು ನೀತಿಯಲ್ಲಿ ಒಳಗೊಂಡಿದೆ. ಅಲ್ಲದೇ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪಾರ್ಕಿಂಗ್ ಶುಲ್ಕ ಪಾವತಿ, ಪಾರ್ಕಿಂಗ್ ಲಾಟ್‌ನಲ್ಲಿ ಲಭ್ಯವಿರುವ ಸ್ಥಳದ ಕುರಿತು ಮೊಬೈಲ್‌ನಲ್ಲಿಯೇ ರಿಯಲ್ ಟೈಂ ಮಾಹಿತಿ ನೀಡುವುದು ಸೇರಿ ಹಲವು ಸೌಲಭ್ಯಗಳನ್ನು ಪ್ರಸ್ತಾಪಿಸಲಾಗಿದೆ. ಪಾರ್ಕಿಂಗ್ ಶುಲ್ಕ ಕಡಿಮೆ ಮಾಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಆದರೆ ಜನರು ಆಕ್ಷೇಪಣೆಗಳಲ್ಲಿ ಇದನ್ನು ಸಲ್ಲಿಸಬಹುದಾಗಿದೆ.
ಹಸಿರು ಮಾರ್ಗದ ವಿಸ್ತರಿತ ಮಾರ್ಗವಾದ ನಾಗಸಂದ್ರ-ಮಾದಾವರ ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಎರಡು ಮಾರ್ಗದಲ್ಲಿ ಈ ವರ್ಷ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ. ಆಗ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದ್ದು, ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್‌ಗೆ ಸಹ ಬೇಡಿಕೆ ಹೆಚ್ಚಲಿದೆ.












Click it and Unblock the Notifications