Namma Metro: ನಮ್ಮ ಮೆಟ್ರೋ ಜಾಲ ವಿಸ್ತರಣೆ 143 ಕಿ. ಮೀ., 95 ನಿಲ್ದಾಣ ಸೇರ್ಪಡೆ
ಬೆಂಗಳೂರು, ಜನವರಿ 20: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಸದ್ಯ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮಾತ್ರ ರೈಲುಗಳು ಸಂಚಾರವನ್ನು ನಡೆಸುತ್ತಿದೆ. ಪ್ರತಿನಿತ್ಯ ಸುಮಾರು 6 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಜಾಲವನ್ನು ಮುಂದಿನ 5 ವರ್ಷಗಳಲ್ಲಿ ಹೇಗೆ ವಿಸ್ತರಣೆ ಮಾಡಲಾಗುತ್ತದೆ? ಎಂದು ಯೋಜನೆ ರೂಪಿಸಿದೆ.
ನಮ್ಮ ಮೆಟ್ರೋ ಯೋಜನೆಯ 'ಹಳದಿ ಮಾರ್ಗ' ಆರ್. ವಿ. ರಸ್ತೆ-ಬೊಮ್ಮಸಂದ್ರ ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಗರದ ಬಹು ನಿರೀಕ್ಷಿತ ಮಾರ್ಗವಿದು. ನೀಲಿ ಮತ್ತು ಗುಲಾಬಿ ಮಾರ್ಗದ ಕಾಮಗಾರಿ ಸದ್ಯ ನಡೆಯುತ್ತಿದೆ. 2026ರಲ್ಲಿ ನೀಲಿ, ಗುಲಾಬಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಮುಂದಿನ 5 ವರ್ಷಗಳಲ್ಲಿ 143 ಕಿ. ಮೀ. ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಿ, ಜಾಲ ವಿಸ್ತರಣೆ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಇದರಿಂದಾಗಿ ನಗರಕ್ಕೆ ಇನ್ನೂ 95 ನಿಲ್ದಾಣಗಳು ಸೇರ್ಪಡೆಯಾಗಲಿವೆ.
77 ಕಿ. ಮೀ. ಮೆಟ್ರೋ ಜಾಲ: ಸದ್ಯ ನಮ್ಮ ಮೆಟ್ರೋ ಜಾಲ ಬೆಂಗಳೂರು ನಗರದಲ್ಲಿ 77 ಕಿ. ಮೀ. ಆಗಿದೆ. ಇದರಲ್ಲಿ ನೇರಳೆ ಮಾರ್ಗ ವೈಟ್ ಫೀಲ್ಡ್-ಚಲ್ಲಘಟ್ಟ (43.49 ಕಿ. ಮೀ.), ಹಸಿರು ಮಾರ್ಗ ನಾಗಸಂದ್ರ-ರೇಷ್ಮೆ ಸಂಸ್ಥೆ (35.5 ಕಿ. ಮೀ.).
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ನಮ್ಮ ಮೆಟ್ರೋ ಫೇಸ್-3 ಯೋಜನೆಗೆ ಅನುಮೋದನೆ ನೀಡಿದೆ. ಇದು ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗ (36.58 ಕಿ. ಮೀ.) ಆಗಿದೆ. ಕೆಂಪು ಮಾರ್ಗ ಹೊರತುಪಡಿಸಿ ಉಳಿದ ಎಲ್ಲಾ ಮಾರ್ಗದಲ್ಲಿ 2026ರಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ನಮ್ಮ ಮೆಟ್ರೋ ಹಂತ-2 ನೀಲಿ ಮಾರ್ಗ (58.19 ಕಿ. ಮೀ.) ಮತ್ತು ಗುಲಾಬಿ ಮಾರ್ಗ (21.26 ಕಿ. ಮೀ.) ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರ ಈ ಎರಡೂ ಮಾರ್ಗವನ್ನು 2026ರ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ನೀಲಿ ಮಾರ್ಗದಲ್ಲಿ ಹಂತ 2ಎ ಮತ್ತು 2 ಬಿ ವಿಭಾಗವಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆಆರ್ ಪುರಂ ಮತ್ತು ವಿಮಾನ ನಿಲ್ದಾಣಕ್ಕೆ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಸಿವಿಲ್ ಕಾಮಗಾರಿ ಶೇ 45ರಷ್ಟು ಪೂರ್ಣಗೊಂಡಿದೆ, ಹೆಚ್ಚುವರಿಯಾಗಿ ಹೊರ ವರ್ತುಲ ರಸ್ತೆಯಿಂದ ಏರ್‌ಪೋರ್ಟ್ ತನಕ ಹಳಿ ಹಾಕುವ ಕಾರ್ಯವೂ ಮುಗಿದಿದೆ.
ಗುಲಾಬಿ ಮಾರ್ಗದಲ್ಲಿ 13 ಕಿ. ಮೀ. ಸುರಂಗ ಮಾರ್ಗ ಕಾಳೇನ ಅಗ್ರಹಾರ ದಿಂದ ನಾಗವಾರ ಮುಕ್ತಾಯಗೊಂಡಿದೆ. ಶೇ 22ರಷ್ಟು ಸಿವಿಲ್ ಕಾಮಗಾರಿ ತಾವರೆಕೆರೆ-ನಾಗವಾರ ಮಾರ್ಗದಲ್ಲಿ ಪೂರ್ಣಗೊಂಡಿದೆ. ಕಾಳೇನ ಅಗ್ರಹಾರದ ಎತ್ತರಿಸಿದ ಮಾರ್ಗದಲ್ಲಿ ಶೇ 79ರಷ್ಟು ಹಳಿ ಹಾಕುವ ಕಾರ್ಯ ಪೂರ್ಣಗೊಂಡಿದೆ.
ನಮ್ಮ ಮೆಟ್ರೋ ಹಂತ-3 ಯೋಜನೆಯ ವೆಚ್ಚ 15,611 ಕೋಟಿ ರೂ.ಗಳು. ಕಿತ್ತಲೆ ಮಾರ್ಗ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಜೆಪಿ ನಗರ 4ನೇ ಹಂತ-ಕೆಂಪಾಪುರ, ಹೊಸಹಳ್ಳಿ-ಕಡಬಗೆರೆ ಕಾರಿಡಾರ್ ಇದರಲ್ಲಿ ಒಳಗೊಂಡಿದೆ. ಈ ಮಾರ್ಗ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಆಸ್ತಿಗಳನ್ನು ಗುರುತಿಸಿ ಸಮೀಕ್ಷೆಯನ್ನು ಮಾಡಲಾಗುತ್ತಿದೆ.












Click it and Unblock the Notifications