ವಿದ್ಯುತ್ ಬಿಲ್ ಹೆಚ್ಚಿಗೆ ಬಂತಾ?: ಸ್ಪಷ್ಟನೆ ಕೊಟ್ಟ ಬೆಸ್ಕಾಂ
ಬೆಂಗಳೂರು, ಜುಲೈ 22: ಜೂನ್ ತಿಂಗಳ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಜನರು ವಿದ್ಯುತ್ ಸರಬರಾಜು ಕಂಪನಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿಜವಾಗಿ ಆಗಿರುವುದೇನು?.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಗ್ರಾಹಕರಿಂದ ಹೆಚ್ಚುವರಿ ತೆರಿಗೆಯನ್ನು ವಸೂಲಿ ಮಾಡುತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ. ಜೂನ್ ತಿಂಗಳಿನಲ್ಲಿ ಸಾಮಾನ್ಯ ವಿದ್ಯುತ್ ಬಿಲ್‌ನಲ್ಲಿ ಹೆಚ್ಚಳವಾಗಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.

ಹೆಚ್ಚುವರಿ ಭದ್ರತಾ ಠೇವಣಿ ಅಥವ ಯಾವುದೇ ಹೊಸ ತೆರಿಗೆಯನ್ನು ಗ್ರಾಹಕರಿಂದ ಜೂನ್ ತಿಂಗಳ ಬಿಲ್‌ನಲ್ಲಿ ವಸೂಲಿ ಮಾಡಿಲ್ಲ. ಹೆಚ್ಚುವರಿ ಭದ್ರತಾ ಠೇವಣಿ ಕುರಿತು ಯಾವುದೇ ಗೊಂದಲಗಳಿದ್ದರೆ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಬೆಸ್ಕಾಂ ತಿಳಿಸಿದೆ.
ಗೊಂದಲಗಳು ಬೇಡ: ಗ್ರಾಹಕರ ವಿದ್ಯುತ್ ಬಳಕೆಗೆ ಅನುಗುಣವಾಗಿ ಅವರ ವಾರ್ಷಿಕ ಸರಾಸರಿ ಬಳಕೆಯನ್ನು ಆಧರಿಸಿ ಭದ್ರತಾ ಠೇವಣಿ ನಿರ್ಧಾರ ಮಾಡಲಾಗುತ್ತದೆ. ಭದ್ರತಾ ಠೇವಣಿಗೆ ವರ್ಷಾಂತ್ಯದಲ್ಲಿ ಆ ಠೇವಣಿ ಹಣಕ್ಕೆ ಗ್ರಾಹಕರಿಗೆ ಲಾಭಾಂಶ (ಐಒಡಿ) ನೀಡಲಾಗುತ್ತದೆ ಎಂದು ಬೆಸ್ಕಾಂ ಹೇಳಿದೆ.
ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಬಿಲ್ ಶೂನ್ಯವಾಗಿದ್ದೂ, ಬಿಲ್‌ನಲ್ಲಿ ಋಣಾತ್ಮಕ ಮೊತ್ತ ನಮೂದಾಗಿದ್ದರೆ, ಅದು ಜೂನ್ ಅಂತ್ಯದಲ್ಲಿ ಹೆಚ್ಚುವರಿ ಭದ್ರತಾ ಠೇವಣಿಗೆ ಬೆಸ್ಕಾಂ ನೀಡುವ ಬಡ್ಡಿದರವಾಗಿದೆ. ಅದನ್ನು ಮುಂದೆ ಶೂನ್ಯ ಬಿಲ್‌ನಿಂದ ಹೊರಬಂದಾಗ ವಿದ್ಯುತ್ ಶುಲ್ಕಕ್ಕೆ ಸರಿ ಹೊಂದಿಸಲಾಗುತ್ತದೆ.
ಈ ಋಣಾತ್ಮಕ ಮೊತ್ತವನ್ನು ಗ್ರಾಹಕರು ಪಾವತಿ ಮಾಡಬೇಕಿಲ್ಲ. ಶೂನ್ಯ ಬಿಲ್ ಇದ್ದರೆ ಬಿಲ್‌ನ ಕೆಳಭಾಗದಲ್ಲಿ ಠೇವಣಿ ಮೇಲಿನ ಬಡ್ಡಿ ಐಒಡಿ ಎಂದು ನಮೂದಿಸಲಾಗಿರುತ್ತದೆ. ಕೆಇಆರ್‌ಸಿ ನಿಯಮಗಳ ಅನ್ವಯ ಗ್ರಾಹಕರ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿ ಆಧರಿಸಿ ಭದ್ರತಾ ಠೇವಣಿಯನ್ನು ನಿರ್ಧರಿಸಲಾಗುತ್ತದೆ.
ಬೇಡಿಕೆಗಿಂತ ಸರಾಸರಿ ಕಡಿಮೆ ಇದ್ದಲ್ಲಿ ಗ್ರಾಹಕರಿಗೆ ಭದ್ರತಾ ಠೇವಣಿ ಹಣ ಪಾವತಿಸಲಾಗುತ್ತದೆ. ಇಲ್ಲವೇ ಸರಾಸರಿಯ ಬೇಡಿಕೆಗಿಂತ ಹೆಚ್ಚಿದ್ದಲ್ಲಿ ಅದರನ್ವಯ ಬೇಡಿಕೆ ಭದ್ರತಾ ಠೇವಣಿಯನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ.
ಸರ್ಕಾರದ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡುವ ಸಬ್ಸಿಡಿಗಳು ಕೃಷಿ ಪಂಪ್‌ಸೆಟ್ ಮತ್ತು ಗೃಹಜ್ಯೋತಿ ಯೋಜನೆಗೆ ಮಾತ್ರ ಅನ್ವಯವಾಗುತ್ತದೆ. ಇತರ ಅನುದಾನವನ್ನು ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮೊತ್ತದ ಮೂಲಕ ಪಡೆಯಬೇಕಾಗುತ್ತದೆ ಎಂದು ಬೆಸ್ಕಾಂ ಹೇಳಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗೃಹಜ್ಯೋತಿ ಗ್ಯಾರಂಟಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಗ್ರಾಹಕರು ಶೂನ್ಯ ಬಿಲ್ ಪಡೆಯುವ ಕಾರಣ ಭದ್ರತಾ ಠೇವಣಿ ಹಣ ಅವರ ಖಾತೆಯಲ್ಲಿಯೇ ಜಮಾ ಆಗಿರುತ್ತದೆ. ಗ್ರಾಹಕರು ಶೂನ್ಯ ಬಿಲ್‌ನಿಂದ ಹೊರ ಬಂದಾಗ ಜಮಾ ಆಗಿರುವ ಹಣವನ್ನು ವಿದ್ಯುತ್ ಶುಲ್ಕದ ಜೊತೆ ಹೊಂದಿಸಲಾಗುತ್ತದೆ.
ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ.












Click it and Unblock the Notifications