Bengaluru 2nd Airport: ಈ ಸ್ಥಳದಲ್ಲೇ ವಿಮಾನ ನಿಲ್ದಾಣ? 7-8 ವರ್ಷದಲ್ಲಿ ಕಾಮಗಾರಿ ಪೂರ್ಣ!
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸ್ಥಳ ಗುರುತಿಸುವ ಕೆಲಸ ಕೊನೆಯ ಹಂತಕ್ಕೆ ತಲುಪಿದೆ. ಸರ್ಕಾರ ಹಲವು ಸುತ್ತಿನ ಸಭೆ ನಡೆಸಿದ್ದು ಇನ್ನು ಕೆಲವು ದಿನಗಳಲ್ಲಿ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಸುತ್ತಮುತ್ತ ಒಟ್ಟು ಆರು ಸ್ಥಳಗಳನ್ನು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿತ್ತು, ಅದರಲ್ಲಿ ಈಗ ಮೂರು ಸ್ಥಳಗಳು ಮುಂಚೂಣಿಯಲ್ಲಿವೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಎರಡನೇ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೊಸ ವಿಮಾನ ನಿಲ್ದಾಣಕ್ಕಾಗಿ ರಾಜ್ಯವು ಮೂರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿಗೆ ಕಳಿಸಿದ್ದು ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

2008ರಿಂದ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2024 ರಲ್ಲಿ ಪ್ರಯಾಣಿಕರ ಸಂಖ್ಯೆ 9 ಪ್ರತಿಶತ ಹೆಚ್ಚಾಗಿದ್ದು ಒಂದು ವರ್ಷದಲ್ಲಿ 40.73 ಮಿಲಿಯನ್ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಬಳಕೆ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಪ್ರಸ್ತಾವಿತ ಸ್ಥಳಗಳ ಮಾಹಿತಿ
ಆರು ಕಡೆಗಳಲ್ಲಿ ಸ್ಥಳ ಗುರುತಿಸಿದ್ದರು ಅಂತಿಮ ರೇಸ್‌ನಲ್ಲಿ ಮೂರು ಸ್ಥಳಗಳು ಉಳಿದುಕೊಂಡಿವೆ. ದಕ್ಷಿಣ ಬೆಂಗಳೂರು ಭಾಗದ ಕನಕಪುರ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಇದರಲ್ಲಿ ಒಂದು ಬೆಂಗಳೂರು ನಗರ ಜಿಲ್ಲೆಗೆ ಸೇರಿದ್ದರೆ ಮತ್ತೊಂದು ರಾಮನಗರ ಜಿಲ್ಲೆಗೆ ಸೇರಿದ್ದಾಗಿದೆ. ಅದರಲ್ಲಿ ಒಂದು ಸ್ಥಳ ಬೆಂಗಳೂರು ಮೆಟ್ರೋ ಹಸಿರು ಮಾರ್ಗದ ಟರ್ಮಿನಲ್ ನಿಲ್ದಾಣಕ್ಕೆ ಸಮೀಪದಲ್ಲಿದೆ. ಒಂದು ಕಡೆ 4,800 ಎಕರೆ ಜಾಗವನ್ನು ಗುರುತಿಸಿದ್ದರೆ ಮತ್ತೊಂದು ಕಡೆ 5,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ.
ಮೂರನೇ ಸ್ಥಳವು ನೆಲಮಂಗಲ-ಕುಣಿಗಲ್ ನಡುವೆ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಸ್ಥಳಕ್ಕೆ, ಬೆಂಗಳೂರು - ತುಮಕೂರು ಎಕ್ಸ್‌ಪ್ರೆಸ್‌ವೇ, ಫೆರಿಫೆರಲ್ ರಿಂಗ್ ರಸ್ತೆ, ನೈಸ್ ರಸ್ತೆ ಹತ್ತಿರವಾಗಲಿದೆ. ಇಲ್ಲಿ ಸುಮಾರು 5,200 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.
ಎಎಐ ಅಂಗಳದಲ್ಲಿ ಚೆಂಡು!
ಕರ್ನಾಟಕ ರಾಜ್ಯ ಸರ್ಕಾರ ಗುರುತಿಸಿರುವ ಸ್ಥಳಗಳಲ್ಲಿ ಯಾವುದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿದೆ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿದೆ ಎನ್ನುವುದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಪ್ರಾಥಮಿಕವಾಗಿ ಮೌಲ್ಯಮಾಪನ ನಡೆಸುತ್ತದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಗರ ಕೇಂದ್ರದಿಂದ 50 ಕಿ.ಮೀ ವ್ಯಾಪ್ತಿಯೊಳಗೆ ಇರಬೇಕು, ರಸ್ತೆ ಸಂಪರ್ಕ ಉತ್ತಮವಾಗಿರಬೇಕು, ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಸಾರಿಗೆ ಸಂಪರ್ಕ ಹೊಂದಿರುವುದು ಅಗತ್ಯವಾಗಿರುತ್ತದೆ.
ಪ್ರಸ್ತುತ ವಿಮಾನ ನಿಲ್ದಾಣದ ಕಾರ್ಯಾಚರಣೆಯ ನಿರ್ಬಂಧಗಳು ಮತ್ತು ಈ ಪ್ರದೇಶದ ವಿವಿಧ ವಾಯುಯಾನ ಸಂಸ್ಥೆಗಳ ನಡುವೆ ಹಂಚಿಕೆಯಾಗಿರುವ ಸಂಚಾರದಿಂದಾಗಿ ಹೊಸ ವಿಮಾನ ನಿಲ್ದಾಣ ಅಗತ್ಯವಿದೆ ಎಂದು ರಾಜ್ಯ ಭಾರೀ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
2033 ರವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬಾರದು ಎನ್ನುವ ಷರತ್ತು ವಿಧಿಸಲಾಗಿದೆ. ಈಗ ಇರುವ ವಿಮಾನ ನಿಲ್ದಾಣವನ್ನು 2030 ರ ವೇಳೆಗೆ 100 ಮಿಲಿಯನ್ ಪ್ರಯಾಣಿಕರು ಬಳಸುವ ಅಂದಾಜಿದ್ದು ಇದು ವಿಮಾನ ನಿಲ್ದಾಣದ ಕಾರ್ಯಾಚರಣೆ ಮೇಲೆ ಒತ್ತಡ ಉಂಟು ಮಾಡುತ್ತದೆ. ಆದ್ದರಿಂದ ನಗರದ ಅಭಿವೃದ್ಧಿಗಾಗಿ ಎರಡನೇ ವಿಮಾನ ನಿಲ್ದಾಣ ಅಗತ್ಯವಿದೆ.
7 ರಿಂದ 8 ವರ್ಷದಲ್ಲಿ ನಿರ್ಮಾಣ
ಸ್ಥಳ ಗುರುತಿಸುವಿಕೆ, ಭೂಸ್ವಾಧೀನ, ನೀಲನಕ್ಷೆ ತಯಾರಿ, ಟೆಂಡರ್ ಸೇರಿದಂತೆ ಹಲವು ಕೆಲಸಗಳ ಬಳಿಕ ಕಾಮಗಾರಿ ಆರಂಭವಾಗಲಿದೆ. ಒಮ್ಮೆ ಕಾಮಗಾರಿ ಆರಂಭವಾದರೆ 7 ರಿಂದ 8 ವರ್ಷದಲ್ಲಿ ಮುಗಿಸುವ ಸಾಧ್ಯತೆ ಇದೆ. 2035 ರ ವೇಳೆಗೆ ಅಂದರೆ ಇನ್ನೊಂದು ದಶಕದಲ್ಲಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಮಾಡುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.
ಎರಡನೇ ವಿಮಾನ ನಿಲ್ದಾಣಕ್ಕೆ ಯಾವ ಸ್ಥಳ ಸೂಕ್ತ?
ಎಲ್ಲಾ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಇದೀಗ ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದು ವರದಿಗಳಿವೆ, ಆದರೆ ಅಭಿವೃದ್ಧಿಯನ್ನು ಮಾತ್ರ ಮಾನದಂಡವನ್ನಾಗಿಸಿ ಸ್ಥಳವನ್ನು ಆಯ್ಕೆ ಮಾಡುವುದಾಗಿ ಎಂಬಿ ಪಾಟೀಲ್ ತಿಳಿಸಿದ್ದಾರೆ.
ನೆಲಮಂಗಲ ಬಳಿ ಗುರುತಿಸಿರುವ ಪ್ರದೇಶ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಎನ್ನುವ ವಾದ ಕೇಳಿ ಬಂದಿದೆ. ತುಮಕೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಯುತ್ತಿದ್ದು ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಮುಗಿಯಲಿದೆ, ಮುಂದಿನ ದಿನಗಳಲ್ಲಿ ನೆಲಮಂಗಲದವರೆಗೆ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಸಾಧ್ಯತೆ ಇದ್ದು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡರೆ ನೆಲಮಂಗಲದ ಬಳಿಯ ಸ್ಥಳವೇ ಸೂಕ್ತ ಎನ್ನುವ ವಾದ ಕೇಳಿ ಬಂದಿದೆ.
ಆದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮೂರು ಸ್ಥಳಗಳನ್ನು ಪರಿಶೀಲನೆ ಮಾಡಲಿದ್ದು ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿ ಸ್ಥಳ ಆಯ್ಕೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಕೂಡ ಇದೆ.
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಕಡೆಯೇ ಆಗಲಿದೆ ಎಂದು ಈಗಾಗಲೇ ಹಲವು ಕಡೆಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ಕೂಡ ವಿಮಾನ ನಿಲ್ದಾಣದ ಸಮೀಪ ಲೇಔಟ್ ಇದೆ ಎಂದು ಪ್ರಚಾರ ಕೂಡ ಆರಂಭಿಸಿವೆ. ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡು ಘೋಷಣೆ ಮಾಡುವವರೆಗೆ ಯಾವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎನ್ನುವುದು ಖಚಿತವಾಗುವುದಿಲ್ಲ.












Click it and Unblock the Notifications