Bengaluru 2nd Airport: ಭೂಮಿಗೆ ಬಂಗಾರದ ಬೆಲೆ ಬಂದರೂ, ಹೊಸ ತಲೆನೋವು!
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗಾಗಲೇ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದೆ. ಇದರ ನಡುವೆ ಬೆಂಗಳೂರಿನ ಸುತ್ತಮುತ್ತಲಿನ ಏಳು ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಬೆಂಗಳೂರು ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದರೂ, ಈ ಭಾಗದ ಜನ ಸಂತೋಷಪಡುವ ಪರಿಸ್ಥಿತಿ ಇಲ್ಲ. ಬದಲಾಗಿ ಭೂಮಿ ಉಳಿಸಿಕೊಳ್ಳುವುದು ಹಾಗೂ ಖರೀದಿ ಮಾಡುವುದು ಸಹ ಸವಾಲಾಗುತ್ತಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಕನಕಪುರ ರಸ್ತೆ ಹಾಗೂ ಬಿಡದಿಯ ಜಾಗಗಳನ್ನು ರಾಜ್ಯ ಸರ್ಕಾರವು ಶಾರ್ಟ್ ಲಿಸ್ಟ್ ಮಾಡಿದೆ. ಆದರೆ, ಇದರೊಂದಿಗೆ ಏಳು ಜಾಗಗಳ ಬಗ್ಗೆಯೂ ಚರ್ಚೆ ನಡೆದಿದೆ. ಬಜೆಟ್‌ನ ನಂತರ ಈ ಬಗ್ಗೆ ಫೈನಲ್ ಆಗುವ ಸಾಧ್ಯತೆ ಇದೆ.
ಎರಡನೇ ವಿಮಾನ ನಿಲ್ದಾಣ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಭೂಮಿಯನ್ನು ಮಾರಾಟ ಮಾಡುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಡದಿ ಹಾಗೂ ಕನಕಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಯ ಬೆಲೆ ಕೋಟ್ಯಾಂತರ ರೂಪಾಯಿ ಆಗಲಿದೆ ಎನ್ನುವ ಲೆಕ್ಕಾಚಾರವಿದೆ. ಯಾಕೆಂದರೆ ಈಗಾಗಲೇ ದೇವನಹಳ್ಳಿಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣವಾದಾಗ ಇಲ್ಲಿನ ಭೂಮಿಯ ಬೆಲೆ ಏಕಾಏಕಿ ಹೆಚ್ಚಳವಾಗಿತ್ತು. ಅಲ್ಲದೆ ಇಲ್ಲಿನ ಭೂಮಾಲೀಕರು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು. ಇದೀಗ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲೂ ಇದೇ ಆಸೆ ಚಿಗುರೊಡೆದಿದೆ.

ರಿಯಲ್ ಎಸ್ಟೇಟ್ ದಂಧೆ: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ವಿಷಯ ಪ್ರಸ್ತಾವನೆ ಆಗುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ಚಿಗುರೊಡೆದಿದೆ. ಆದರೆ ರಿಯಲ್ ಎಸ್ಟೇಟ್ ಬೂಮ್ ಆಗುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ದಂಧೆ ಶುರುವಾಗಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ನಿರ್ಮಾಣ ವಿಚಾರವನ್ನು ಇರಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಶುರುವಾಗಿದೆ.
ನೆಲಮಂಗಲ ಹಾಗೂ ಬಿಡದಿ ಸೇರಿದಂತೆ ವಿವಿಧ ಭಾಗದಲ್ಲಿ ಭೂಮಿ ಮಾರಾಟ ಹೆಚ್ಚಳವಾಗಿದೆ. ಆದರೆ, ಬೆಂಗಳೂರು ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ ಎನ್ನುವುದು ತಿಳಿಯದೆಯೇ / ಅಂತಿಮವಾಗುವುದಕ್ಕೂ ಮುಂಚೆಯೇ ಹಲವು ರಿಯಲ್ ಎಸ್ಟೇಟ್‌ದಾರರು ಇಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಲೇಔಟ್, ಮನೆ ಹಾಗೂ ಜಾಗವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನ ಸಹ ಇದೇ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬಹುದು ಎಂದುಕೊಂಡು ಜಾಗವನ್ನು ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜ್ಯ ಸರ್ಕಾರವು ಮೆಲ್ಲನೆ ಹೆಜ್ಜೆಗಳನ್ನು ಇರಿಸುತ್ತಿದೆ. ಆದರೆ, ರಿಯಲ್ ಎಸ್ಟೇಟ್‌ದಾರರು ಈಗಲೇ ಘೋಷಣೆಯಾಗುತ್ತಿರುವ ಅಥವಾ ವಿಮಾನ ನಿಲ್ದಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿರುವ ಜಾಗಗಳಲ್ಲಿ ಭೂಮಿಗೆ ಭಾರೀ ಬೆಲೆ ನಿಗದಿ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ಅಂತಿಮವಾದರೆ ಭೂಮಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬರಲಿದೆ ಎನ್ನುವ ಆಸೆಯಲ್ಲಿ ಕೆಲವರು ಭೂಮಿ ಸಹ ಖರೀದಿ ಮಾಡುತ್ತಿದ್ದಾರೆ.












Click it and Unblock the Notifications