ಇನ್ನೂ ಎರಡು ವಾರ ಬಿಸಿಲಲ್ಲಿ ಬೇಯಲಿದೆ ಬೆಂಗಳೂರು
ಬೆಂಗಳೂರು, ಫೆಬ್ರವರಿ 26: ಜನವರಿ ಮುಗಿಯುತ್ತಿದ್ದಂತೆ ಭರ್ಜರಿ ರಣ ಬಿಸಿಲು ಬೆಂಗಳೂರಿಗೆ ಕಾಲಿಟ್ಟಿದೆ. ಫೆಬ್ರವರಿ 25 ದಶಕದಲ್ಲೇ ಬೆಂಗಳೂರು ಕಂಡ ಅತ್ಯಂತ ಬಿಸಿಲು ಕಂಡ ದಿನವೆಂದು ಹವಾಮಾನ ಇಲಾಖೆ ಹೇಳಿದೆ.
ಫೆಬ್ರವರಿಯಲ್ಲಿಯೇ ಹೀಗಾದರೆ ಮಾರ್ಚ್ ಏಪ್ರಿಲ್ ಕತೆ ಹೇಗೆಂದು ರಾಜ್ಯದ ಜನ ಈಗಾಗಲೇ ಚಿಂತೆ ಮಾಡುತ್ತಿದ್ದಾರೆ. ಚಿಂತೆಯ ಗೆರೆಗಳು ಹೆಚ್ಚುವಂತಾ ವರದಿಯನ್ನೇ ಹವಾಮಾನ ಇಲಾಖೆ ನೀಡುತ್ತಿದೆ.
ರಾಜ್ಯದಾದ್ಯಂತ ಬಿಸಿಲು ರಣವಾಗಿ ಸುರಿಯುತ್ತಿದೆ. ಬೆಂಗಳೂರಿನಲ್ಲಂತೂ ಬಿಸಿಲಿನ ಝಳ ತುಸು ಅಧಿಕವಾಗಿಯೇ ಇದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ವಾರಗಳು ಅತ್ಯಂತ ಬಿಸಿಲಿನ ದಿನಗಳನ್ನು ಬೆಂಗಳೂರು ನೋಡಲಿದೆಯಂತೆ.

ಹತ್ತಿರದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ, ಆದರೆ ಎರಡು ವಾರಗಳ ಬಳಿಕ ಹನಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರ ನಗರದಲ್ಲಿ 35 ಡಿಗ್ರಿ ಉಷ್ಣಾಂಶ ಇತ್ತು. ದಶಕದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಫೆಬ್ರವರಿ ತಿಂಗಳ ದಿನ ಇದಾಗಿ ದಾಖಲೆಗೆ ಸೇರಿತು. ಸಾಮಾನ್ಯವಾಗಿ ಶಿವರಾತ್ರಿಯ ನಂತರ ಬಿಸಿಲು ಹೆಚ್ಚಾಗುವುದು ವಾಡಿಕೆ ಆದರೆ ಈ ಬಾರಿ ಬಿಸಿಲು ಸ್ವಲ್ಪ ಬೇಗವೇ ಹೆಚ್ಚಾಗಿದೆ.
ಅತಿಯಾದ ಬಿಸಿಲಿನಿಂದ ಸನ್ ಸ್ಟ್ರೋಕ್ ಆಗುವ ಸಂಭವ, ನಿರ್ಜಲೀಕರಣ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications