Bengaluru Rains: ಜನವರಿ 13ಕ್ಕೆ ನಗರದಲ್ಲಿ ವ್ಯಾಪಕ ಮಳೆ ನಿರೀಕ್ಷೆ, ಹವಾಮಾನ ಮುನ್ಸೂಚನೆ
ಬೆಂಗಳೂರು, ಜನವರಿ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ವಾತಾವರಣ ಯಾವಾಗ ಹೇಗೆ ಬದಲಾಗುತ್ತದೆ ಎಂಬುದು ಊಹೆಗೂ ನಿಲುಕದಂತಾಗಿದೆ. ಕೆಲವೊಮ್ಮೆ ಬೆಳಗ್ಗೆ ಚಳಿ ಇದ್ದರೆ, ಮಧ್ಯಾಹ್ನ ಒಣಹವೆ, ಸಂಜೆ ಜೋರು ಮಳೆಯನ್ನು ನಗರವಾಸಿಗಳು ಕಾಣುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿ ಜನರು ಕಳೆದ ಕೆಲವು ವರ್ಷಗಳಿಂದ ಸಾಕ್ಷಿಯಾಗುತ್ತಿದ್ದಾರೆ. ಇದೀಗ ಒಣಹವೆ ಜೊತೆಗೆ ಬೆಳಗ್ಗೆ ತೀವ್ರ ಚಳಿ ಮುಂದುವರಿದಿದ್ದು, ಈ ಮಧ್ಯೆ ಬೆಂಗಳೂರಿಗೆ ಮಳೆ ಎಚ್ಚರಿಕೆ ನೀಡಲಾಗಿದೆ.
ಹೌದು, ಉದ್ಯಾನ ನಗರಿ ಬೆಂಗಳೂರಿನಲ್ಲಿ ನಾಳೆ ಜನವರಿ 13ರಂದು ಸಾಧಾರಣದಿಂದ ವ್ಯಾಪಕ ಮಳೆ, ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ ಸೋಮವಾರ ನಗರದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಇಂದು ಸಂಜೆ ಅಥವಾ ರಾತ್ರಿ ವಾತಾವರಣದಲ್ಲಿ ಒಂದಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.

ಅರಬ್ಬಿ ಸಮುದ್ರ, ಹಿಂದು ಮಹಾಸಾಗರದಲ್ಲಿ ಉಂಟಾಗಿದ್ದ ಹವಾಮಾನ ವೈಪರಿತ್ಯಗಳಿಂದ ಬೆಂಗಳೂರಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಹಗುರದಿಂದ ಸಾಧಾರಣ ಮಳೆ ನಗರದ ವಿವಿಧ ಕಡೆಗಳಲ್ಲಿ ಬರುವ ನಿರೀಕ್ಷೆ ಇದೆ. ಈ ಮಳೆ ನಾಳೆ ಒಂದು ದಿನವೇ ಬರಲಿದ್ದು, ನಾಡಿದ್ದು ಅಂದರೆ ಜನವರಿ 14ರಿಂದ ಎಂದಿನಂತೆ ಒಣಹವೆ ಹಾಗೂ ಚಳಿ ವಾತಾವರಣ ಮುಂದುವರಿಯಲಿದೆ.
ಮಂಗಳವಾರದಿಂದ ಮೂರು ದಿನ ಬೆಳಗ್ಗೆ ಮತ್ತು ಸಂಜೆ ಚಳಿ ಉಂಟಾಗಲಿದೆ. ಮಧ್ಯಾಹ್ನ ಒಣಹವೆ ಕಂಡು ಬರಲಿದೆ. ಆಗಾಗ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾದರೆ, ಗರಿಷ್ಠ ತಾಪಮಾನ ಏರಿಕೆ ಆಗುವ ಲಕ್ಷಣಗಳು ಇವೆ.
ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬರುವ ಮುನ್ಸೂಚನೆ ಇದೆ. ಜನರು ಥಂಡಿ ಸಹಿತ ಮಳೆ ಎದುರು ನೋಡಲಿದ್ದಾರೆ. ಐಎಂಡಿ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ.
ಇಂದು ಭಾನುವಾರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕಾರವಾರ, ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ ಎಂದು ಐಎಂಡಿ ವರದಿ ನೀಡಿದೆ.












Click it and Unblock the Notifications