ಬೆಂಗಳೂರು: ವರ್ತೂರು-ಗುಂಜೂರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ 25 ಸಾವಿರ ವಿದ್ಯಾರ್ಥಿಗಳು ಹೈರಾಣು, ಪೋಷಕರ ಆಕ್ರೋಶ!
ಪೂರ್ವ ಬೆಂಗಳೂರಿನ ವರ್ತೂರು-ಗುಂಜೂರು-ವೈಟ್‌ಫೀಲ್ಡ್ ಕಾರಿಡಾರ್ ಈಗ ವಾಹನ ಸವಾರರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ನರಕದಂತಾಗಿದೆ. ಕೇವಲ ಐದು ಕಿಲೋಮೀಟರ್ ಕ್ರಮಿಸಲು ಶಾಲಾ ಬಸ್‌ಗಳು ಎರಡು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಗುರುವಾರ ಸಂಭವಿಸಿದ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಾವಿರಾರು ಮಕ್ಕಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಹೈರಾಣಾಗಿದ್ದಾರೆ.
ದಿನೇ ದಿನೇ ಹೆಚ್ಚಾಗುತ್ತಿರುವ ಈ ಟ್ರಾಫಿಕ್ ಸಮಸ್ಯೆಯಿಂದ ರೋಸಿಹೋಗಿರುವ ಪೋಷಕರು ಮತ್ತು ಸ್ಥಳೀಯ ನಿವಾಸಿಗಳು ಇದೀಗ ಒಂದಾಗಿದ್ದಾರೆ. ತಕ್ಷಣವೇ ಸಂಚಾರ ನಿರ್ವಹಣೆ ಮತ್ತು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹಣಾ ಅಭಿಯಾನವನ್ನು ಆರಂಭಿಸಿದ್ದಾರೆ. ರಸ್ತೆಯ ಹದಗೆಟ್ಟ ಸ್ಥಿತಿ ಹಾಗೂ ಸುದೀರ್ಘ ಟ್ರಾಫಿಕ್ ಜಾಮ್ ಶಾಲಾ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮಾರ್ಗದಲ್ಲಿ ಗುಂಡಿಗಳೇ ರಸ್ತೆಯಾಗಿ ಮಾರ್ಪಟ್ಟಿವೆ. ಈ ಕಾರಿಡಾರ್ ಉದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ಶಾಲೆಗಳಿದ್ದು, ಪ್ರತಿದಿನ 15,000 ದಿಂದ 25,000 ವಿದ್ಯಾರ್ಥಿಗಳು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ನಿತ್ಯ 200 ರಿಂದ 300 ಶಾಲಾ ಬಸ್‌ಗಳು ಇದೇ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.
"ಗುಂಜೂರು ಕೆರೆ ಮತ್ತು ಗುಂಜೂರು ಮಾರ್ಗದಲ್ಲಿ ಶಾಲಾ ಬಸ್ ಪ್ರಯಾಣವು ಮಕ್ಕಳಿಗೆ ಶಿಕ್ಷೆಯಂತಾಗಿದೆ. 4 ಕಿ.ಮೀ ಗಿಂತ ಕಡಿಮೆ ದೂರವನ್ನು ಕ್ರಮಿಸಲು ಎರಡೂವರೆ ಗಂಟೆ ಬೇಕಾಯಿತು. ಹೆಚ್ಚಿನ ದಿನಗಳಲ್ಲಿ ನಾನು ಶಾಲೆಗೆ ತಲುಪುವಷ್ಟರಲ್ಲಿ ಮೊದಲ ತರಗತಿ ಮುಗಿದೇ ಹೋಗಿರುತ್ತದೆ" ಎಂದು ಬೇಸರ ವ್ಯಕ್ತಪಡಿಸುತ್ತಾನೆ ಶಾಲಾ ವಿದ್ಯಾರ್ಥಿಯೊಬ್ಬ.
ಬೀದಿಗಿಳಿದ ಪೋಷಕರು: ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪ್ರಮುಖ ಬೇಡಿಕೆಗಳು
ಮಕ್ಕಳ ಈ ಪರದಾಟವನ್ನು ಕಂಡು ಅಸಹಾಯಕರಾಗಿದ್ದ ಪೋಷಕರು ಈಗ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ನಾಲ್ಕು ಪ್ರಮುಖ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
1. ಭಾರಿ ವಾಹನಗಳಿಗೆ ನಿರ್ಬಂಧ: ಶಾಲಾ ಸಮಯದಲ್ಲಿ ಅಂದರೆ ಪೀಕ್ ಅವರ್‌ಗಳಲ್ಲಿ ನಿರ್ಮಾಣ ಸಾಮಗ್ರಿಗಳನ್ನ ಸಾಗಿಸುವ ಲಾರಿಗಳು ಮತ್ತು ನೀರಿನ ಟ್ಯಾಂಕರ್‌ಗಳ ಸಂಚಾರವನ್ನ ಸಂಪೂರ್ಣವಾಗಿ ನಿರ್ಬಂಧಿಸಬೇಕು.
2. ರಸ್ತೆ ಮತ್ತು ಚರಂಡಿ ದುರಸ್ತಿ: ಮಳೆಯಿಂದ ಹಾಗೂ ಕಳಪೆ ಕಾಮಗಾರಿಯಿಂದ ಹಾಳಾಗಿರುವ ಗುಂಡಿಗಳನ್ನ ಮುಚ್ಚಿ, ಚರಂಡಿ ವ್ಯವಸ್ಥೆಯನ್ನ ತುರ್ತಾಗಿ ಸರಿಪಡಿಸಬೇಕು.
3. ಸಂಚಾರ ನಿರ್ವಹಣೆ: ಕೆಆರ್‌ಡಿಸಿಎಲ್ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
4. ಜಂಟಿ ಪರಿಶೀಲನೆ: ಟ್ರಾಫಿಕ್ ಪೊಲೀಸ್, ಜಿಬಿಎ, ಕೆಆರ್‌ಡಿಸಿಎಲ್ ಅಧಿಕಾರಿಗಳು ಹಾಗೂ ಶಾಲಾ-ಪೋಷಕರ ಪ್ರತಿನಿಧಿಗಳನ್ನೊಳಗೊಂಡ ತಂಡವು ಜಂಟಿ ಪರಿಶೀಲನೆ ನಡೆಸಬೇಕು.
ಸ್ಥಳೀಯರ ಆಕ್ರೋಶ
ರಸ್ತೆಯ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಬೇಸತ್ತ ಸಾರ್ವಜನಿಕರೇ ಸ್ವತಃ ಗುಂಡಿಗಳನ್ನ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಕ್ಯಾಂಡೂರ್ ಲ್ಯಾಂಡ್‌ಮಾರ್ಕ್ ಬಳಿಯ ರಾಮಮಂದಿರ ಜಂಕ್ಷನ್‌ನಲ್ಲಿ ಕೇವಲ 200-300 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಿಂದ ವಾಹನಗಳು ತೆವಳಿಕೊಂಡು ಸಾಗುವಂತಾಗಿದೆ. ವರ್ತೂರು ಪೊಲೀಸ್ ಠಾಣೆಯಿಂದ ವರ್ತೂರು ಕೋಡಿವರೆಗಿನ 2 ಕಿ.ಮೀ ರಸ್ತೆಗೆ ಕೂಡಲೇ ಡಾಂಬರೀಕರಣ ಮಾಡಬೇಕು ಎಂದು ಸ್ಥಳೀಯ ನಿವಾಸಿ ವಿದ್ಯಾಸಾಗರ್ ಒತ್ತಾಯಿಸಿದ್ದಾರೆ ಎಂದು ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ಇದರ ಜೊತೆಗೆ, ಬ್ರಿಗೇಡ್ ಯುಟೋಪಿಯಾ ಮತ್ತು ಕ್ಯಾಂಡೂರ್ ಲ್ಯಾಂಡ್‌ಮಾರ್ಕ್ ನಡುವೆ ಡಿವೈಡರ್‌ಗಳನ್ನ ಅಳವಡಿಸಬೇಕು, ಹೆಚ್ಚು ಟ್ರಾಫಿಕ್ ಪೊಲೀಸರನ್ನ ನಿಯೋಜಿಸಬೇಕು ಹಾಗೂ ಬಿಎಂಟಿಸಿ ಬಸ್‌ಗಳ ನೇರ ಸಂಪರ್ಕ ಕಲ್ಪಿಸಿದರೆ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ ಎಂಬುದು ನಿವಾಸಿಗಳ ಸಲಹೆಯಾಗಿದೆ.
"ವರ್ತೂರಿನ ಸಮಸ್ಯೆಯು ಕೇವಲ ರಸ್ತೆ ವಿಸ್ತರಣೆಯಿಂದ ಬಗೆಹರಿಯುವುದಿಲ್ಲ. ಇಲ್ಲಿನ ಸಂಚಾರ ದಟ್ಟಣೆ, ಮಾಲಿನ್ಯ, ಕಸ ವಿಲೇವಾರಿ, ಪಾದಚಾರಿಗಳ ಸುರಕ್ಷತೆ ಸೇರಿದಂತೆ ಬಹುಮುಖಿ ಸಮಸ್ಯೆಗಳಿದ್ದು, ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ" ಎಂದು ಸ್ಥಳೀಯ ನಿವಾಸಿ ಮೋನಾಲಿಸಾ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಪ್ರತಿದಿನ ನರಕಯಾತನೆ ಅನುಭವಿಸುತ್ತಿರುವ ಸಾವಿರಾರು ಮಕ್ಕಳ ಹಿತದೃಷ್ಟಿಯಿಂದಾದರೂ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.


Click it and Unblock the Notifications
