ಬೆಂಗಳೂರಿನ ಟ್ರಾಫಿಕ್‌ನಲ್ಲಿ ಒಂದು ತಿಂಗಳ ದುಡಿಮೆ ವ್ಯರ್ಥ! ವರ್ಷಕ್ಕೆ ಸಂಬಳದ ಶೇ.8ರಷ್ಟು ನಷ್ಟ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕೇವಲ ಸಂಚಾರ ದಟ್ಟಣೆಗೆ ಸೀಮಿತವಾಗಿಲ್ಲ. ಇದು ಉದ್ಯೋಗಿಗಳ ಅಮೂಲ್ಯ ಸಮಯ, ಆದಾಯ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಗರದ ಟ್ರಾಫಿಕ್‌ನಲ್ಲಿ ವ್ಯರ್ಥವಾಗುವ ಸಮಯವು ಒಬ್ಬ ದುಡಿಯುವ ವ್ಯಕ್ತಿಯ ಒಂದು ತಿಂಗಳ ಕೆಲಸದ ದಿನಗಳ ದುಡಿಮೆಗೆ ಸಮನಾಗಿದೆ ಎಂದು ಪ್ರಾಸ್ಪರ್ ಐಒ (Prosper IO) ಎಂಬ ತೆರಿಗೆ ಮೌಲ್ಯಮಾಪನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಸಂಸ್ಥೆಯು ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಟ್ರಾಫಿಕ್‌ನಲ್ಲಿ ಕಳೆಯುವ ಸಮಯವು ಉದ್ಯೋಗಿಯ ವಾರ್ಷಿಕ ವೇತನದ ಶೇ.8ರಷ್ಟು ಮೊತ್ತಕ್ಕೆ ಸಮನಾದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.

ಟೆಕ್ ಪಾರ್ಕ್ ಬಳಿ ಮನೆ ಮಾಡಿದರೆ ಹೆಚ್ಚುವರಿ ಬಾಡಿಗೆ!
ಟ್ರಾಫಿಕ್‌ನಲ್ಲಿ ವ್ಯರ್ಥವಾಗುವ ಸಮಯವನ್ನು ಉಳಿಸಲು ಉದ್ಯೋಗಿಗಳು ಕಚೇರಿ ಅಥವಾ ಟೆಕ್ ಪಾರ್ಕ್‌ಗಳ ಸಮೀಪದಲ್ಲೇ ವಾಸಿಸುವುದು ಒಂದು ಪರಿಹಾರವಾಗಬಹುದು. ಆದರೆ, ಅದಕ್ಕೂ ಹೆಚ್ಚುವರಿ ಹಣ ವ್ಯಯಿಸಬೇಕಾಗುತ್ತದೆ. ಟೆಕ್ ಪಾರ್ಕ್‌ಗಳ ಸಮೀಪ ಮನೆ ಬಾಡಿಗೆಗೆ ಪಡೆಯಲು ವರ್ಷಕ್ಕೆ ಸುಮಾರು ₹1.6 ಲಕ್ಷದಿಂದ ₹2.4 ಲಕ್ಷದವರೆಗೆ ಹೆಚ್ಚುವರಿ ವೆಚ್ಚವಾಗಬಹುದು ಎಂದು ಸಂಸ್ಥೆ ಹೇಳಿದೆ.
ಹೀಗಾಗಿ, ಉದ್ಯೋಗಿಗಳು ಟ್ರಾಫಿಕ್‌ನಲ್ಲಿ ಸಮಯ ಕಳೆಯಬೇಕೋ ಅಥವಾ ಕಚೇರಿಯ ಸಮೀಪ ವಾಸಿಸಲು ಹೆಚ್ಚಿನ ಬಾಡಿಗೆ ಪಾವತಿಸಬೇಕೋ ಎಂಬ ಸವಾಲು ಎದುರಿಸುತ್ತಿದ್ದಾರೆ. ನಗರದ ಸಂಚಾರ ಸಮಸ್ಯೆ ಜನರ ದೈನಂದಿನ ಜೀವನದ ಮೇಲೆ ಬೀರುತ್ತಿರುವ ಆರ್ಥಿಕ ಪರಿಣಾಮವನ್ನು ಈ ಅಂಕಿಅಂಶಗಳು ಎತ್ತಿ ತೋರಿಸುತ್ತವೆ.
ಟ್ರಾಫಿಕ್ ಕಿರಿಕಿರಿ ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯ!
ಬೆಂಗಳೂರಿನ ಸಂಚಾರ ದಟ್ಟಣೆ ನಾಗರಿಕರ ಆರೋಗ್ಯ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೂ ಸವಾಲಾಗಿದೆ. ಹೃದಯಾಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ವಿಳಂಬವಾದರೆ ಜೀವಕ್ಕೆ ಅಪಾಯ ಹೆಚ್ಚಬಹುದು. ಪ್ರಾಸ್ಪರ್ ಐಒ ವರದಿಯ ಪ್ರಕಾರ, ಹೃದಯಾಘಾತದ ಸಂದರ್ಭದಲ್ಲಿ ಪ್ರತಿ 30 ನಿಮಿಷಗಳ ವಿಳಂಬವು ಸಾವಿನ ಅಪಾಯವನ್ನು ಶೇ.7.5ರಷ್ಟು ಹೆಚ್ಚಿಸಬಹುದು ಎಂದು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ರಸ್ತೆಗಳಲ್ಲಿನ ಗುಂಡಿಗಳು, ಅಪೂರ್ಣ ಮೂಲಸೌಕರ್ಯ ಮತ್ತು ವಾಹನಗಳ ಹೆಚ್ಚುತ್ತಿರುವ ಸಂಖ್ಯೆಯೂ ಸಂಚಾರ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿವೆ. ನಗರದ ಹೊರ ವರ್ತುಲ ರಸ್ತೆಯಲ್ಲಿ ಅದರ ಸಾಮರ್ಥ್ಯಕ್ಕಿಂತ ದುಪ್ಪಟ್ಟು ವಾಹನಗಳು ಸಂಚರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಅಗತ್ಯ
ಈ ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಿರುವ ಉದ್ಯಮಿ ಕಿರಣ್ ಮಜುಮ್ದಾರ್ ಶಾ, ಬೆಂಗಳೂರಿನ ಸಮಸ್ಯೆಗಳನ್ನು ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ದತ್ತಾಂಶದ ಆಧಾರದ ಮೇಲೆ ಸಂಘಟಿತವಾಗಿ ಪರಿಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರದ ತ್ವರಿತ ಬೆಳವಣಿಗೆಗೆ ಅವಕಾಶ ನೀಡುವ ಧಾವಂತದಲ್ಲಿ, ದೀರ್ಘಕಾಲೀನ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕೆಲವು ಮೂಲಭೂತ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ಎಡವಿದ್ದೇವೆ ಎಂದು ಅವರು ಹೇಳಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಯೋಜಿತ ನಗರಾಭಿವೃದ್ಧಿ, ಸಾರ್ವಜನಿಕ ಸಾರಿಗೆ ವಿಸ್ತರಣೆ ಮತ್ತು ಉತ್ತಮ ರಸ್ತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕೆಂಬ ಚರ್ಚೆಗೆ ಅವರ ಪ್ರತಿಕ್ರಿಯೆ ಮಹತ್ವ ನೀಡಿದೆ.
Bengaluru Traffic: ಟ್ರಾಫಿಕ್ ಸಮಸ್ಯೆಗೆ ಸಂಸ್ಥೆ ಸೂಚಿಸಿದ ಪರಿಹಾರಗಳೇನು?
ಬಸ್‌ಗಳಿಗೆ ಪ್ರತ್ಯೇಕ ಪಥ: ಮೆಟ್ರೋ ಕಾಮಗಾರಿಯಿಂದ ಸ್ಥಗಿತಗೊಂಡಿರುವ ರಿಂಗ್ ರಸ್ತೆಯ ಪ್ರತ್ಯೇಕ ಬಸ್ ಪಥವನ್ನು ಪುನಾರಂಭಿಸಬೇಕು.
ಆ್ಯಂಬುಲೆನ್ಸ್‌ಗೆ ಆದ್ಯತೆ: ತುರ್ತು ವೈದ್ಯಕೀಯ ಸೇವೆಗಳ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕದಂತೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.
ಮೆಟ್ರೋ ಮತ್ತು ಸಬರ್ಬನ್ ರೈಲು: ನಗರದಲ್ಲಿ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು.
ರಿಂಗ್ ರಸ್ತೆ ಮೆಟ್ರೋ: ರಿಂಗ್ ರಸ್ತೆಯ ಮೆಟ್ರೋ ಯೋಜನೆಗೆ ವೇಗ ನೀಡಬೇಕು.
ರಸ್ತೆ ಗುಂಡಿಗಳ ದುರಸ್ತಿ: ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಮುಚ್ಚಿ, ಸುರಕ್ಷಿತ ಹಾಗೂ ಉತ್ತಮ ರಸ್ತೆ ಮೂಲಸೌಕರ್ಯ ಒದಗಿಸಬೇಕು.


Click it and Unblock the Notifications
