Bengaluru Traffic: ಬೆಂಗಳೂರು ಟ್ರಾಫಿಕ್‌ನಿಂದ ಆರೋಗ್ಯ ಸುಧಾರಣೆ: ವೈರಲ್ ಆಯ್ತು ಟೆಕ್ಕಿ ಹೇಳಿಕೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಎಂದರೆ ಯಾರಿಗೆ ತಾನೇ ಕೋಪ ಬರಲ್ಲ? ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವ ಪರಿಸ್ಥಿತಿಯನ್ನು ಕಂಡು ಎಲ್ಲರೂ ಹಿಡಿಶಾಪ ಹಾಕುತ್ತಾರೆ. ಆದರೆ, ಇದೇ ಟ್ರಾಫಿಕ್‌ನಿಂದಾಗಿ ನನ್ನ ಆರೋಗ್ಯ ಸುಧಾರಿಸಿದೆ ಎಂದು ಟೆಕ್ಕಿಯೊಬ್ಬರು ಹೇಳಿಕೊಂಡಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರೆಡ್ಡಿಟ್‌ನಲ್ಲಿ ಈ ಕುರಿತು ಅವರು ಹಂಚಿಕೊಂಡಿರುವ 'ಅನ್ ಪಾಪ್ಯುಲರ್ ಒಪಿನಿಯನ್' ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಟ್ರಾಫಿಕ್ ತಂದ ಬದಲಾವಣೆ: ವೈಟ್ ಫೀಲ್ಡ್‌ನಿಂದ ಕೊರಮಂಗಲಕ್ಕೆ ಪ್ರತಿದಿನ ಪ್ರಯಾಣಿಸುತ್ತಿದ್ದ ಈ ವ್ಯಕ್ತಿ, ಕನಿಷ್ಠ 90 ನಿಮಿಷಗಳ ಕಾಲ ರಸ್ತೆಯಲ್ಲೇ ಕಳೆಯಬೇಕಿತ್ತು. ಅಂದರೆ ದಿನಕ್ಕೆ ಸುಮಾರು 3 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕುತ್ತಿದ್ದರು. "ಟ್ರಾಫಿಕ್‌ನಿಂದಾಗಿ ನಾನು ಸದಾ ಒತ್ತಡದಲ್ಲಿದ್ದೆ. ಕಚೇರಿಯ ಡೆಸ್ಕ್ ಮೇಲೆ ಕುಳಿತೇ ಊಟ ಮಾಡುತ್ತಿದ್ದೆ. ವ್ಯಾಯಾಮ ಮಾಡಲು ಸಮಯವೇ ಇರುತ್ತಿರಲಿಲ್ಲ," ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಈ ಅಸಹಜ ಜೀವನಶೈಲಿಯಿಂದ ಬೇಸತ್ತ ಅವರು, ಸಂಚಾರ ದಟ್ಟಣೆಯೊಂದಿಗೆ ಹೋರಾಡುವುದನ್ನು ಬಿಟ್ಟು ತಮ್ಮ ಹಾದಿಯನ್ನೇ ಬದಲಿಸಿಕೊಂಡರು. ವಾರದಲ್ಲಿ ಮೂರು ದಿನ 'ವರ್ಕ್ ಫ್ರಮ್ ಹೋಮ್' (WFH) ಆಯ್ಕೆ ಮಾಡಿಕೊಂಡರು. ಬೆಳಿಗ್ಗೆ 6 ಗಂಟೆಗೆ ಮನೆ ಹತ್ತಿರದ ಜಿಮ್‌ಗೆ ಹೋಗಲು ಆರಂಭಿಸಿದರು. ಹೊರಗಿನಿಂದ ಆಹಾರ ಆರ್ಡರ್ ಮಾಡುವ ಬದಲು, ಹತ್ತಿರದ ಹೋಟೆಲ್‌ಗಳಿಗೆ ನಡೆದುಕೊಂಡು ಹೋಗಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡರು.
ಈ ಹೊಸ ಜೀವನಶೈಲಿಯಿಂದ ಅದ್ಭುತ ಬದಲಾವಣೆಗಳಾಗಿವೆ ಎಂದು ಅವರು ಹೇಳಿದ್ದಾರೆ. "ಈಗ ನಾನು 25 ವರ್ಷದವನಿದ್ದಾಗಿಗಿಂತಲೂ ಹೆಚ್ಚು ಫಿಟ್ ಆಗಿದ್ದೇನೆ. ನನ್ನ ವಿಶ್ರಾಂತಿ ಸ್ಥಿತಿಯ ಹೃದಯ ಬಡಿತದ ದರ 82 ರಿಂದ 64ಕ್ಕೆ ಇಳಿದಿದೆ. ಯಾವುದೇ ಕಠಿಣ ಪ್ರಯತ್ನವಿಲ್ಲದೆ 8 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಟ್ರಾಫಿಕ್ ವ್ಯವಸ್ಥೆ ಸುಧಾರಿಸದಿದ್ದರೂ, ನಾನು ಅದರೊಂದಿಗೆ ಹೋರಾಡುವುದನ್ನು ನಿಲ್ಲಿಸಿದ್ದಕ್ಕೆ ಈ ಆರೋಗ್ಯ ಲಭಿಸಿದೆ," ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ:
ಈ ಪೋಸ್ಟ್ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಆರೋಗ್ಯ ಸುಧಾರಿಸಲು ಟ್ರಾಫಿಕ್ ಕಾರಣವಲ್ಲ, ಬದಲಿಗೆ ನೀವು ಕೆಲಸ ಮಾಡುವ ವಿಧಾನ ಮತ್ತು ವ್ಯಾಯಾಮಕ್ಕೆ ನೀಡಿದ ಸಮಯ ಕಾರಣ. ವರ್ಕ್ ಫ್ರಮ್ ಹೋಮ್‌ನಿಂದಾಗಿ ಇಂತಹ ಬದಲಾವಣೆ ಸಾಧ್ಯವಾಯಿತು," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ನಾನು ನನ್ನ ಬೈಕ್ ಮಾರಿ ಈಗ ಎಲ್ಲೆಡೆ ನಡೆದುಕೊಂಡು ಹೋಗುತ್ತಿದ್ದೇನೆ, ಇದರಿಂದ ನನ್ನ ಕೊಲೆಸ್ಟ್ರಾಲ್ ಮಟ್ಟ ಸಹಜ ಸ್ಥಿತಿಗೆ ಬಂದಿದೆ," ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯು ಜನರ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡ ಹೇರುತ್ತಿರುವುದು ನಿಜ. ಆದರೆ, ಈ ಟೆಕ್ಕಿಯಂತೆ ಟ್ರಾಫಿಕ್ ಎಂಬ ಅನಿವಾರ್ಯತೆಯನ್ನು ಸವಾಲಾಗಿ ಸ್ವೀಕರಿಸಿ, ತಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ಈ ವೈರಲ್ ಸುದ್ದಿಯ ಸಾರಾಂಶವಾಗಿದೆ.












Click it and Unblock the Notifications