Towing: ಬೆಂಗಳೂರು ವಾಹನ ಸವಾರರೇ ಎಚ್ಚರ: 96 ಸ್ಥಳಗಳಲ್ಲಿ ಟೊಯಿಂಗ್ ಜಾರಿಗೆ ಪ್ಲಾನ್! ಹೊಸ ನಿಯಮಗಳು..
ಬೆಂಗಳೂರು, ಆಗಸ್ಟ್ 07: ರಾಜಧಾನಿ ಬೆಂಗಳೂರಿನಲ್ಲಿ ಮೂರು ವರ್ಷಗಳ ಹಿಂದೆ (2022) ನಿಲ್ಲಿಸಿದ್ದ ಟೊಯಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವುದನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಈ ಬಾರಿ ಖಾಸಗಿ ಸಹಭಾಗಿತ್ಯವ ಹೊರಗಿಟ್ಟು ಹೊಸ ನಿಯಮ ರೂಪಿಸಲಾಗಿದೆ ಎಂದು 'ದಿ ಹಿಂದೂ'ವರದಿ ಮಾಡಿದೆ.
ಹೌದು, ಟ್ರಾಫಿಕ್‌ಗೆ ಹೆಸರುವಾಸಿಯಾದ ಬೆಂಗಳೂರಲ್ಲಿ ರಸ್ತೆಗಳ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮುಂದಾಗಿದ್ದಾರೆ. ಅನಧಿಕೃತವಾಗಿ ರಸ್ತೆಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಎಳೆಯುವ ಟೊಯಿಂಗ್ ವ್ಯವಸ್ಥೆ ಪುನರಾರಂಭಗೊಳ್ಳಲಿದೆ. ಹೊಸ ನಿಯಮಗಳೊಂದಿಗೆ ಜಾರಿಗೆ ಬರಲಿದೆ. ಖಾಸಗಿ ಕಂಪನಿ, ಏಜೆನ್ಸಿಗಳನ್ನು ದೂರವಿಟ್ಟು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಕಾರದಲ್ಲಿ ಟೋಯಿಂಗ್ ಮತ್ತೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಟೋಯಿಂಗ್ ವೇಳೆ ಆಗುತ್ತಿದ್ದ ಎಲ್ಲ ಸಮಸ್ಯೆಗೆ ಪರಿಹಾರ ಸಮೇತ ಪೊಲೀಸರು ರಸ್ತೆಗೆ ಇಳಿಯಲಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ 2022 ರಲ್ಲಿ ಖಾಸಗಿ ಟೋವಿಂಗ್ ಏಜೆನ್ಸಿಗಳ ವಿರುದ್ಧ ಕಿರುಕುಳದ ಅರೋಪಗಳು, ದೂರುಗಳು ಬಂದವು. ಮನಬಂದಂತೆ ವಾಹನ ಟೋಯಿಂಗ್ ಮಾಡುವು, ಜನರಿಗೆ ಕಿರಿ ಕಿರಿ ಮಾಡುವ ದಲ್ಲಾಳಿಗಳ ವಿಡಿಯೋ ವೈರಲ್ ಆಗಿದ್ದವು. ಇದರಿಂದ ಜನಾಕ್ರೋಶ ವ್ಯಕ್ತವಾಗಿ, ಪೊಲೀಸರು, ಪೊಲೀಸ್ ಇಲಾಖೆಗೆ ಹಿನ್ನಡೆ ಆಗಿತ್ತು. ಹೀಗಾಗಿ ಅಂದಿನ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಟೋಯಿಂಗ್ ಸ್ಥಗಿತಗೊಳಿಸಿ ಆದೇಶಿಸಿದ್ದರು.
10 ಟೋಯಿಂಗ್ ವಾಹನ ಖರೀದಿ...
ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಇದ್ದು, ಗೃಹ ಸಚಿವರಾಗಿ ಜಿ.ಪರಮೇಶ್ವರ ಅವರಿದ್ದಾರೆ. ಮತ್ತೆ ಟೋಯಿಂದ ಆರಂಭಿಸಲು ಖಾಸಗಿ ವ್ಯಕ್ತಿಗಳನ್ನು ಹೊರಗಿಡಲಾಗಿದೆ. ಸೂಕ್ತ ನಿಯಮಗಳನ್ನು ರೂಪಿಸಲಾಗಿದೆ. ಪೊಲೀಸರು ಬಿಬಿಎಂಪಿ ಚಾಲಕರೊಂದಿಗೆ 10 ಟೋಯಿಂಗ್ ವಾಹನಗಳನ್ನು ಖರೀದಿಸಲು ಸಜ್ಜಾಗಿದೆ. ನಗರ ಟ್ರಾಫಿಕ್ ಪೋಲೀಸ್ ಠಾಣೆಗಳ ಎಲ್ಲಾ 10 ಉಪವಿಭಾಗಗಳಿಗೆ ನಾವು ತಲಾ ಒಂದು ವಾಹನ ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
96 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಟೋಯಿಂಗ್..
ನಿರಂತರವಾಗಿ ಪಾರ್ಕಿಂಗ್ ನಿಂದ ಸಂಚಾರ ದಟ್ಟಣೆ ಅನುಭವಿಸುವ ನಗರದ 96 ಕ್ಕೂ ಹೆಚ್ಚಿನ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ಮೊದಲು ಈ ಟೋವಿಂಗ್ ಅನ್ನು ಮರುಜಾರಿಗೊಳಿಸಲಾಗುತ್ತದೆ. ಅಲ್ಲಿನ ಫಲಿತಾಂಶ, ವ್ಯಕ್ತವಾಗುವ ಅಭಿಪ್ರಾಯ ಹಾಗೂ ಇತರ ಅಂಶಗಳ ಆಧಾರದಲ್ಲಿ ಬೆಂಗಳೂರಿನಾದ್ಯಂತ ಟೋಯಿಂಗ್ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಒಳಗೊಳ್ಳುವಿಕೆ, ಬಿಟಿಪಿ ಚರ್ಚೆ
ಇನ್ನು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಈಗಾಗಲೇ ಬೆಂಗಳೂರು ಟ್ರಾಫಿಕ್ ಪೊಲೀಸರಿಗಾಗಿ ಟೋವಿಂಗ್ ವಾಹನಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಖಚಿತಪಡಿಸಿದರು. ಸದ್ಯ ಟ್ರಾಫಿಕ್ ಪೊಲೀಸರ ಹಂತದಲ್ಲಿ ಸಂಚಾರ ಸುಗಮ, ಮೇಲ್ವಿಚಾರಣೆ, ಬಿಬಿಎಂಪಿಯನ್ನು ದಂಡ ವಸೂಲಾತಿ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಬಗ್ಗೆ, ಟೋಯಿಂಗ್ ಗೆ ಬಿಬಿಎಂಪಿ ಸಹಕಾರ, ಮಾನವಶಕ್ತಿ (ಚಾಲಕ) ಪೂರೈಕೆ ಕುರಿತು ಚರ್ಚೆ ನಡೆಸುತ್ತಿದೆ. ಕಳೆದ ಮೂರು ವರ್ಷಗಳ ನಡುವೆ ಈಶಾನ್ಯ ಸಂಚಾರ ಪೊಲೀಸರು ಐದು ದಿನ ಟೋಯಿಂಗ್ ಆರಂಭಿಸಿದ್ದರು. ಟೋವಿಂಗ್ ಗೆ ಅಧಿಕ ವೆಚ್ಚವಾಗುವ ಕಾರಣಕ್ಕೆ ನಿಲ್ಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.












Click it and Unblock the Notifications