'ಪಲ್ಸ್ ಪೋಲಿಯೋ 2025': ಐದು ವರ್ಷದೊಳಗಿನ ಮಕ್ಕಳ ಪೋಷಕರ ಗಮನಕ್ಕೆ...GBA
ಬೆಂಗಳೂರು, ಡಿಸೆಂಬರ್ 01: ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ಸಾಲಿನಲ್ಲಿ (2025) ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳ ಕಾಲ 'ರಾಷ್ಟ್ರೀಯ ಪಲ್ಸ್ ಪೋಲಿಯೋ' ಕಾರ್ಯಕ್ರಮ ನಡೆಯಲಿದೆ. ಇದರ ಭಾಗವಾಗಿ ಮೈಕ್ರೋ ಪ್ಲಾನ್ ಸಿದ್ದಪಡಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೋಮವಾರ ಸೂಚಿಸಿದರು.
ನಗರದಲ್ಲಿ ಆರೋಗ್ಯ ವಿಭಾಗ ಹಾಗೂ ಕಲ್ಯಾಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ಜಿಬಿಎ ಕೇಂದ್ರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 4 ದಿನಗಳ ಕಾಲ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಆಯಾ ನಗರ ಪಾಲಿಕೆವಾರು ಮೈಕ್ರೋ ಫ್ಲಾನ್ ಸಿದ್ದಪಡಿಸಿಕೊಂಡು ಅದರನುಸಾರ ಸಮಗ್ರ ಯೋಜನೆಗಳನ್ನು ರೂಪಿಸಬೇಕು ಎಂದರು.

ನಗರದಾದ್ಯಂತ ಪಲ್ಸ್ ಫೋಲಿಯೋ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಬೇಕು. ನರ್ಸಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ಬಳಸಿಕೊಂಡು ಎಲ್ಲರಿಗೂ ಪೊಲೀಯೋ ಹನಿ ಹಾಕುವ ಕಾರ್ಯವಾಗಬೇಕೆಂದು ಹೇಳಿದರು.
ಸಂಚಾರಿ ಲಸಿಕಾ ತಂಡಗಳನ್ನು ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೇ ಮತ್ತು ಮೆಟ್ರೊ ನಿಲ್ದಾಣ, ಮಾಲ್‌ಗಳು, ಪ್ರಮುಖ ಉದ್ಯಾನವನಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೋಲಿಯೊ ಹನಿ ಹಾಕುವ ಕೆಲಸ ಮಾಡಬೇಕು.
ಪೋಲಿಯೋ ಲಸಿಕೆ: ಮನೆ ಮನೆಗೆ ಭೇಟಿ
ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಡಿಸೆಂಬರ್ 21ರಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬೂತ್ ಗಳಲ್ಲಿ ಲಸಿಕೆ ಹಾಕಲಾಗುವುದು. 22 ರಿಂದ 24 ರವರೆಗೆ ಮನೆ-ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಅದಲ್ಲದೆ 21 ರಿಂದ 24 ರವರೆಗೆ 4 ದಿನಗಳ ಕಾಲ ಹೆಚ್ಚು ಜನದಟ್ಟಣೆ ಹೊಂದಿರುವ ಪ್ರದೇಶ, ಕೋಳಗೇರಿ ಪ್ರದೇಶಗಳು, ವಲಸಿಗರ ಮೇಲೆ ಹೆಚ್ಚು ಗಮನ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನವಜಾತ ಶಿಶುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳು 2 ಹನಿಗಳ ಪಾಲಿಯೋ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಈ ಹನಿಗಳನ್ನು ನಮ್ಮ ಕ್ಲಿನಿಕ್‌ಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಹೆರಿಗೆ ಆಸ್ಪತ್ರೆಗಳಲ್ಲಿ, ರೆಫರಲ್ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಫಲಾನುಭವಿಗಳ ಅಂತಿಮ ಪಟ್ಟಿ ಕೊಡಿ
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು. ಈ ಸಂಬಂಧ ವಿವಿಧ ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಿರುವವರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿ ನೀಡಲು ಎಲ್ಲಾ ಪಾಲಿಕೆಗಳ ಅಧಿಕಾರಿಗಳಿಗೆ ನಿರ್ದೇಶಿಸಿದರು.












Click it and Unblock the Notifications