ಬೆಂಗಳೂರಲ್ಲಿ ₹3000 ಕೋಟಿ ವೆಚ್ಚದಲ್ಲಿ 250 ಕಿ.ಮೀ ವೈಟ್ ಟಾಪಿಂಗ್: ಮೊದಲ ಬಾರಿಗೆ'ಫೈರ್ ಹೈಡ್ರೆಂಟ್' ವ್ಯವಸ್ಥೆ
ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಬಾಕಿ ಕಾಮಗಾರಿಗೆ ಈಗಾಗಲೇ ವೇಗ ನೀಡಲಾಗಿದೆ. ನಗರದ ಪೇಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೈಟ್ ಟಾಪಿಂಗ್ ರಸ್ತೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಫೈರ್ ಹೈಡ್ರೆಂಟ್' ವ್ಯವಸ್ಥೆ ಅಳವಡಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಟ್ಯಾಂಕ್ ಬಂಡ್ ರಸ್ತೆ ಹಾಗೂ ರಂಗಸ್ವಾಮಿ ಟೆಂಪಲ್ ರಸ್ತೆ (ಆರ್.ಟಿ. ಸ್ಟ್ರೀಟ್) ಗಳಲ್ಲಿ ನೂತನವಾಗಿ ನಿರ್ಮಿಸಿರುವ ವೈಟ್ ಟಾಪಿಂಗ್ ರಸ್ತೆ ಉದ್ಘಾಟಿಸಿ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವೈಟ್ ಟಾಪಿಂಗ್ ಕಾಮಗಾರಿಯಲ್ಲಿ 'ಫೈರ್ ಹೈಡ್ರೆಂಟ್' ವ್ಯವಸ್ಥ ಅಳವಡಿಕೆಯಿಂದ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಾದ ಟ್ಯಾಂಕ್ ಬಂಡ್ ರಸ್ತೆ ಹಾಗೂ ಆರ್.ಟಿ. ಸ್ಟ್ರೀಟ್ ಅನ್ನು ಸಾರ್ವಜನಿಕರ ಬಳಕೆಗೆ ಅಧಿಕೃತವಾಗಿ ಸಮರ್ಪಿಸಲಾಗಿದೆ. ಭವಿಷ್ಯದಲ್ಲಿ ಪದೇ ಪದೇ ರಸ್ತೆ ಅಗೆಯುವ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ, ಬೆಂಗಳೂರು ಜಲಮಮಡಳಿಯ ನೀರು ಸರಬರಾಜು ಹಾಗೂ ಒಳಚರಂಡಿ ಮಾರ್ಗಗಳ ವ್ಯವಸ್ಥೆ, ಸಮಗ್ರ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಯುಟಿಲಿಟಿ ಡಕ್ಟ್ ಜಾಲವನ್ನು ಏಕಕಾಲದಲ್ಲಿ ಅಳವಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ.
ಬಹುಕೋಟಿ ವೆಚ್ಚದಲ್ಲಿ 250 ಕಿಮೀ ವೈಟ್ ಟಾಪಿಂಗ್ ಕಾಮಗಾರಿ
ಬೆಂಗಳೂರಿನಲಲ್ಲಿ ಸದ್ಯ ಮೊದಲ ಹಂತದಲ್ಲಿ ಒಟ್ಟು 196 ಕಿಲೋ ಮೀಟರ್ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಎರಡನೇ ಹಂತದಲ್ಲಿ 120 ಕಿಲೋ ಮೀಟರ್ ರಸ್ತೆ ಕಾಮಗಾರಿಯ ಪೈಕಿ, 60 ಕಿ.ಮೀ ಪೂರ್ಣಗೊಂಡಿದೆ. ಬಾಕಿ 60 ಕಿ.ಮೀ. ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದ್ಯ ಮೂರನೇ ಹಂತದಲ್ಲಿ ಬರೋಬ್ಬರಿ 3,000 ಕೋಟಿ ರೂಪಾಯಿ ವೆಚ್ಚದಲ್ಲಿ 250 ಕಿ.ಮೀ. ಹೊಸದಾಗಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಆರಂಭಿಸಲಾಗುತ್ತಿದೆ. ಈ ಬಹುಕೋಟಿ ಯೋಜನೆಗೆ ಡಿಸೆಂಬರ್ ಒಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಒಮ್ಮೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣವಾದ ನಂತರ 25 ವರ್ಷಗಳಿಗೂ ಹೆಚ್ಚು ಬಾಳಿಕೆ ಬರುತ್ತದೆ. ಇದರಿಂದ ಸರ್ಕಾರದ ನಿರ್ವಹಣಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ವಿಳಂಬ ಇಲ್ಲದೇ ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಶೌಚಾಲಯಗಳ ಕುರಿತು ವಿವಿಧ ಸಾರ್ವಜನಿಕ ಸಂಘ-ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಸಲ್ಲಿಕೆಯಾದ ವರದಿ ನೋಡಿಕೋಂಡು ಶೌಚಾಲಯಗಳ ಗುಣಮಟ್ಟವನ್ನು ಸುಧಾರಿಸಲಾಗುವುದು. ಅಗತ್ಯವಿದ್ಧ ಕಡೆಗಳ್ಲಲಿ ಹೊಸ ಶೌಚಾಲಯ ನಿರ್ಮಿಸಲಾಗುವುದು. ಪಾದಚಾರಿ ಮಾರ್ಗಗಳ ಮೇಲೆ ನಿರ್ಮಾಣವಾಗಿರುವ ಕೆಲವು ಸಾರ್ವಜನಿಕ ಶೌಚಾಲಯ ತೆರವುಗೊಳಿಸಲಾಗುತ್ತಿದೆ. ಉಳಿದ ಕೆಲವು ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಗಾಂಧಿನಗರ ಹಾಗೂ ಮೆಜೆಸ್ಟಿಕ್ ಪ್ರದೇಶವು ನಗರದ ಅತ್ಯಂತ ಹಳೆಯದಾಗಿದ್ದು, ಹಲವು ವರ್ಷಗಳಿಂದ ಈ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ರೀತಿಯಲ್ಲಿ ಮೂಲಸೌಕರ್ಯ ಒಳಗೊಂಡ ಆಧುನಿಕ ರಸ್ತೆಗಳನ್ನು ಇತರೆ ಪ್ರದೇಶಗಳಲ್ಲಿಯೂ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಗಾಂಧಿನಗರ ಪೇಟೆ ಪ್ರದೇಶದಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಅಗ್ನಿಶಾಮಕ ವಾಹನಗಳು ಸುಲಭವಾಗಿ ಸಂಚರಿಸಲಾಗುತ್ತಿಲ್ಲ. ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ನೀರು ಪೂರೈಸಿ ಬೆಂಕಿ ನಂದಿಸಲು ಅನುಕೂಲವಾಗುವಂತೆ ಹೊಸದಾಗಿ ನಿರ್ಮಿಸಲಾಗುತ್ತಿರುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಫೈರ್ ಹೈಡ್ರೆಂಟ್ ವ್ಯವಸ್ಥೆ ಅಳವಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು.
ವಾಣಿಜ್ಯ ಸಂಪರ್ಕ ರಸ್ತೆಗಳು ಅಭಿವೃದ್ಧಿ
* ಟ್ಯಾಂಕ್ ಬಂಡ್ ರಸ್ತೆ
ನಗರದ ಟ್ಯಾಂಕ್ ಬಂಡ್ ರಸ್ತೆ (ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗೆ) ಯನ್ನು 8.74 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 418 ಮೀಟರ್ ಉದ್ದದ ಈ ಪ್ರಮುಖ ರಸ್ತೆಯಲ್ಲಿ 10.5 ಮೀಟರ್ ಅಗಲದ 180 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ಬೃಹತ್ 1000 ಎಂಎಂ ವ್ಯಾಸದ ಮೆಳೆ ನೀರು ಚರಂಡಿ, ಪಾದಚಾರಿ ಸ್ನೇಹಿ ಫುಟ್‌ಪಾತ್ ಮತ್ತು ಚೇಂಬರ್‌ಗಳ ಮೂಲಕ ಸಮಗ್ರ ಯುಟಿಲಿಟಿ ಡಕ್ಟ್‌ಗಳಳನ್ನು (Power & OFC) ಅಳವಡಿಸಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ
ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜಲಮಂಡಳಿಯಿಂದ ವಿನೂತನ "eeze" ಪ್ರಿಕಾಸ್ಟ್ ಸಾರ್ವಜನಿಕ ಶೌಚಾಲಯ ಸ್ಥಾಪಿಸಲಾಗಿದೆ. ಸಂಪೂರ್ಣ ಕಟ್ಟಡವನ್ನು ಸಂಪೂರ್ಣವಾಗಿ ಪ್ರಿಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಪುರುಷರು, ಮಹಿಳೆಯರು, ಮಂಗಳಮುಖಿಯರು (Transgenders) ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲಿದೆ.
* ಆರ್.ಟಿ. ರಸ್ತೆ
ಆರ್.ಟಿ. ರಸ್ತೆ (ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ) ಯನ್ನು 2.52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ವಾಣಿಜ್ಯ ಕೇಂದ್ರವಾದ ಈ ಪ್ರದೇಶದಲ್ಲಿ 645 ಮೀಟರ್ ಉದ್ದದ ರಸ್ತೆಗೆ 3 ಮೀಟರ್ ಅಗಲದ 150 ಎಂ.ಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ರಸ್ತೆಯ ಅಂದವನ್ನು ಹೆಚ್ಚಿಸಲು ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್‌ಗಳೊಂದಿಗೆ ಬಫರ್ ವಲಯವನ್ನು ನಿರ್ಮಿಸಲಾಗಿದೆ.
ಆರ್.ಟಿ. ರಸ್ತೆಯಲ್ಲಿ ವಿನೂತನ 'ಫೈರ್ ಹೈಡ್ರೆಂಟ್' ವ್ಯವಸ್ಥೆ
ಆರ್.ಟಿ. ರಸ್ತೆಯ ಅತ್ಯಂತ ಪ್ರಮುಖ ಅಂಶವೆಂದರೆ, ಇಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ 'ಫೈರ್ ಹೈಡ್ರೆಂಟ್' (Fire Hydrant) ಜಾಲ, ಐತಿಹಾಸಿಕ 'ಬೆಂಗಳೂರು ಪೇಟೆ' ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೀವ್ರ ಅಡಚಣೆಯಾಗಿ ಅಪಾರ ಹಾನಿ ಸಂಭವಿಸಿದ ಉದಾಹರಣೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಕ್ಷಣದ ತುರ್ತು ಸ್ಪಂದನೆ ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆ ಅಳವಡಿಸಲಾಗಿದೆ.


Click it and Unblock the Notifications
