ಪಾಸ್ ಪೋರ್ಟ್ ಪರಿಶೀಲನೆ, ಬೆಂಗಳೂರಿಗೆ ಹೊಸ ವ್ಯವಸ್ಥೆ
ಬೆಂಗಳೂರು, ಜುಲೈ 27: ಪಾಸ್‌ಪೋರ್ಟ್ ಪಡೆಯುವವರಿಗೆ ಸಂತಸದ ಸುದ್ದಿ. ಪೊಲೀಸರ ಪರಿಶೀಲನಾ ಅವಧಿಯನ್ನು ಕಡಿತಗೊಳಿಸಿದ ಬೆನ್ನಲ್ಲೇ ಪಾಸ್ ಪೋರ್ಟ್ ಪರಿಶೀಲನೆಯನ್ನು ಆನ್ ಲೈನ್ ಮೂಲಕವೇ ನಡೆಸುವುದಾಗಿ ಬೆಂಗಳೂರು ಪೊಲೀಸರು ಪ್ರಕಟಿಸಿದ್ದಾರೆ. ಈ ವ್ಯವಸ್ಥೆ ಜಾರಿಗೊಳಿಸಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಗಲಿದೆ.
ಪಾಸ್‌ಪೋರ್ಟ್ ಪಡೆಯುವವರಿಗೆ ಸಂತಸದ ಸುದ್ದಿ. ಪೊಲೀಸರ ಪರಿಶೀಲನಾ ಅವಧಿಯನ್ನು 43 ದಿನಗಳಿಂದ 23 ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಪಿ.ಎಸ್. ಕಾರ್ತಿಕೇಯನ್ ಇತ್ತೀಚೆಗೆ ಘೋಷಿಸಿದ್ದರು.

ಪಾಸ್ ಪೋರ್ಟ್ ವಿತರಣೆಗೂ ಮುನ್ನ ಪೊಲೀಸ್ ಪರಿಶೀಲನೆ ನಡೆಸುವ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಆನ್ ಲೈನ್ ಮೂಲಕವೇ ನಡೆಸಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆ ಪೂರ್ಣ ಪ್ರಮಾಣವಾಗಿ ನವೆಂಬರ್ 2015 ರಿಂದ ಜಾರಿಗೆ ಬರಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. [ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆಗೆ 23 ದಿನ ಮಾತ್ರ]
ಕ್ರೈಂ ಹಾಗೂ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (ಸಿಸಿಟಿಎನ್ಎಸ್) ನ ಡೇಟಾಬೇಸ್ ಪರೀಶಿಲಿಸಿ ಅಭ್ಯರ್ಥಿಗಳ ನೈಜತೆ, ವಿಳಾಸದ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠರು ಅಥವಾ ಡಿಸಿಪಿಗೆ ಅನುಮತಿ ನೀಡಲಾಗುತ್ತದೆ. ಇದರಿಂದ ಕ್ರಿಮಿನಲ್ ದಾಖಲೆಗಳನ್ನು ಪರಿಶೀಲಿಸಿ ಆನ್ ಲೈನ್ ನಲ್ಲೇ ಪರೀಕ್ಷೆ ನಡೆಸಬಹುದಾಗಿದೆ.
ಬಯೋಮೆಟ್ರಿಕ್ ಡೇಟಾ, ಭಾವಚಿತ್ರ, ವಿಳಾಸ ಮುಂತಾದ ಸ್ವವಿವರಗಳು, ಆಧಾರ್ ಕಾರ್ಡ್, ಕ್ರಿಮಿನಲ್ ಇತಿಹಾಸ, ಮುಂತಾದವುಗಳನ್ನು ಸುಲಭವಾಗಿ ಪರೀಕ್ಷಿಸಬಹುದು. ದೇಶದ ಸುಮಾರು 14 ಸಾವಿರಕ್ಕೂ ಅಧಿಕ ಪೊಲೀಸ್ ಸ್ಟೇಷನ್ ಗಳ ದಾಖಲೆಗಳ ಜಾಲ ಇದಾಗಿದೆ.












Click it and Unblock the Notifications