Bengaluru Weather: ಬೆಂಗಳೂರಿನಲ್ಲಿ ಚಳಿಗಾಲದಲ್ಲೂ ಹೆಚ್ಚಲಿದೆ ತಾಪಮಾನ
ಬೆಂಗಳೂರು ಹವಾಮಾನ ಯಾರಿಗೆ ಇಷ್ಟವಾಗಲ್ಲ ಹೇಳಿ, ಇಲ್ಲಿನ ಮಳೆಗಾಲವಂತು ಎಲ್ಲರಿಗೂ ಇಷ್ಟ. ಬೆಂಗಳೂರಿನಲ್ಲಿ ಚಳಿ ಕೂಡ ಹೆಚ್ಚಿರುತ್ತದೆ. ಬೇಸಿಗೆಯಲ್ಲೂ ಬೆಂಗಳೂರು ಕೂಲ್ ಆಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಜನತೆಗೆ ಬೇಸಿಗೆಯ ಬಿಸಿ ತಟ್ಟುತ್ತಿದೆ. ಈ ಬಾರಿ ಹೆಚ್ಚಿನ ಚಳಿಗಾಲ ಇರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಚಳಿಗಾಲದಲ್ಲೂ ಈ ಬಾರಿ ತಾಪಮಾನ ಹೆಚ್ಚಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಕೆಲವು ದಿನಗಳಿಂದ ತಾಪಮಾನ ಸ್ಥಿರವಾಗಿ ಏರಿಕೆಯಾಗುತ್ತಿದೆ. ಆದರೆ ಕನಿಷ್ಠ ತಾಪಮಾನ ನಗರದಲ್ಲಿ ಚಳಿಗಾಲದ ಅನುಭವವನ್ನು ನೀಡುತ್ತದೆ. ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯಕ್ಕಿಂದ 2.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಆದರೂ ನಗರದಲ್ಲಿ ಕನಿಷ್ಠ ತಾಪಮಾನವು 17.1 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಸಾಮಾನ್ಯಕ್ಕಿಂತ 0.1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಚಿತ್ರದುರ್ಗ, ಚಿಂತಾಮಣಿ ಮತ್ತು ಮೈಸೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. ವಾರಾಂತ್ಯದಲ್ಲಿ ಬೆಂಗಳೂರಿನ ತಾಪಮಾನ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ.
1990 ರಿಂದ 2020ರ ವರೆಗೆ 30 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳ ಸರಾಸರಿ ಗರಿಷ್ಠ ತಾಪಮಾನ 30.9 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ ಕನಿಷ್ಠ 17.6 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ಫೆಬ್ರವರಿಯಲ್ಲಿ ಬೆಚ್ಚಗಿನ ಹವಾಮಾನ ಹೆಚ್ಚಾಗಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಿಂದ 35.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. 10 ವರ್ಷಗಳಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ನಿಂದ 16.5 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು.
2004ರ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ದಾಖಲಾದ ಅತ್ಯಂತ ಬೆಚ್ಚಗಿನ ದಿನವಾಗಿದೆ. ಗರಿಷ್ಠ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು, ಫೆಬ್ರವರಿ 6, 1884ರಂದು ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಅತ್ಯಂತ ತಂಪಾದ ಅಂದರೆ ಕನಿಷ್ಠ 9.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಶಿವರಾತ್ರಿ ಆಸುಪಾಸಿನಲ್ಲಿ ಬೇಸಿಗೆ ಆರಂಭವಾಗುತ್ತದೆ ಎಂದು ಪರಿಗಣಿಸಲಾಗಿದೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬ ಇದ್ದು ಬಳಿಕ ನಗರದಲ್ಲಿ ತಾಪಮಾನ ಹೆಚ್ಚಾಗಲಿದೆ.












Click it and Unblock the Notifications